LATEST NEWS
ಪುತ್ತೂರು ನಾಡ ಬಾಂಬ್ ಸಿಡಿಸಿ ಮನೆ ಮಂದಿ ಹತ್ಯೆಗೆ ಯತ್ನಿಸಿದ್ದ ಆರೋಪಿ ಬಂಧನ

ಪುತ್ತೂರು ನಾಡ ಬಾಂಬ್ ಸಿಡಿಸಿ ಮನೆ ಮಂದಿ ಹತ್ಯೆಗೆ ಯತ್ನಿಸಿದ್ದ ಆರೋಪಿ ಬಂಧನ
ಪುತ್ತೂರು, ಅಕ್ಟೋಬರ್ 27: ನಾಡ ಬಾಂಬ್ ಸಿಡಿಸಿ ಮನೆ ಮಂದಿಯ ಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಕಬಕ ಗ್ರಾಮದ ಪೋಳ್ಯ ಎಂಬಲ್ಲಿನ ನಾರಾಯಣ ಪ್ರಸಾದ್ ಎಂಬವರ ಮನೆಯಲ್ಲಿ ಅಕ್ಟೋಬರ್ 15 ರಂದು ತಡ ರಾತ್ರಿ ಕಚ್ಚಾ ಬಾಂಬ್ ಸ್ಪೋಟಗೊಳಿಸಿ ಮನೆಯನ್ನು ಧ್ವಂಸಗೊಳಿಸಿ ಮನೆ ಮಂದಿಯ ಹತ್ಯೆಗೆ ಸಂಚು ರೂಪಿಸಿದ ಆರೋಪಿ ಬಾಬು ಯಾನೆ ಬಾಲನ್ ಎಂಬಾತನನ್ನು ಬಂಧಿಸಿದ್ದಾರೆ.
ಪುತ್ತೂರು ನಗರ ಠಾಣೆಯ ಪೊಲೀಸರ 11 ದಿನಗಳ ಕಾರ್ಯಾಚರಣೆಯ ನಂತರ ಕೇರಳದಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಕೇರಳದ ಎರ್ನಾಕುಲಂ ನಿವಾಸಿ ಎಂದು ತಿಳಿದುಬಂದಿದೆ. ನಾರಾಯಣ ಪ್ರಸಾದ್ ಅವರ ಪೋಳ್ಯದಲ್ಲಿರುವ ಮನೆಯ ಮುಂಭಾಗದಲ್ಲಿ ಬಾಂಬ್ ಸ್ಫೋಟಗೊಳಿಸಿದ್ದ. ಘಟನೆಯಿಂದಾಗಿ ನಾರಾಯಣ ಪ್ರಸಾದ್ ರ ಪತ್ನಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮನೆ ದ್ವಂಸ ಕೃತ್ಯಕ್ಕೆ ಬಳಸಿದ ಮೂರು ಬಾಂಬ್‍ನಲ್ಲಿ ಒಂದು ಬಾಂಬ್ ಸ್ಪೋಟಗೊಂಡಿದ್ದು ಇನ್ನೆರಡು ಜೀವಂತ ಬಾಂಬ್ ಪತ್ತೆಯಾಗಿತ್ತು.
ಈ ಘಟನೆಯ ಬಳಿಕ ಬಾಬು ಯಾನೆ ಬಾಲು ಪತ್ತೆ ಕಾರ್ಯಕ್ಕೆ ಎಸ್ಪಿಯವರ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಎಸ್.ಐ ಅಜೇಯ್ ಅವರ ತಂಡ ಅಕ್ಟೋಬರ್ 16ರಿಂದ ಕೇರಳದಲ್ಲಿ ಮುಕ್ಕಾಂ ಹೂಡಿ ಪತ್ತೆ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿ ಹೆಚ್ಚಿನ ವಿಚಾರಣೆಗೆ ಸಂಬಂಧಿಸಿ 5 ದಿನಗಳ ಕಸ್ಟಡಿಗೆ ಪಡೆದು ಕೊಳ್ಳಲಾಗಿದೆ.