Connect with us

LATEST NEWS

ಪುತ್ತೂರು ನಗರಸಭೆ ಸದಸ್ಯನ ವಿರುದ್ದ ಅಧ್ಯಕ್ಷೆಯಿಂದ ಮುಖ್ಯಮಂತ್ರಿಗೆ ದೂರು

ಪುತ್ತೂರು ಸೆಪ್ಟೆಂಬರ್ 14: ಪುತ್ತೂರು ನಗರಸಭೆ ಸದಸ್ಯನ ವಿರುದ್ದ ನಗರ ಸಭೆಯ ಅಧ್ಯಕ್ಷೆ ಮುಖ್ಯಮಂತ್ರಿಗಳಿಗೆ ದೂರು ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ನಗರ ಸಭೆಯ ಹಿರಿಯ ಬಿಜೆಪಿ ಸದಸ್ಯರಾದ ರಾಜೇಶ್ ಬನ್ನೂರು ವಿರುದ್ಧ ಅಧ್ಯಕ್ಷೆ ಜಯಂತಿ ಬಲ್ನಾಡ್ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದು, ದೂರಿನಲ್ಲಿ ರಾಜೇಶ್ ಬನ್ನೂರು ವಿರುದ್ಧ ಜಾತಿ ನಿಂದನೆ ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿದೆ.

ಅಧ್ಯಕ್ಷೆ ಜಯಂತಿ ಬಲ್ನಾಡ್ ಮುಖ್ಯಮಂತ್ರಿಗಳಿಗೆ ನೀಡಿದ ದೂರಿನ ವಿವರ

ಮೂಲಗಳ ಪ್ರಕಾರ ಅಧ್ಯಕ್ಷೆ ತನ್ನ ದೂರಿನಲ್ಲಿ ರಾಜೇಶ್ ಬನ್ನೂರು ನಗರ ಸಭೆಯಲ್ಲಿ ನಡೆಯುವ ಸಭೆಯನ್ನು ಸರಿಯಾಗಿ ನಡೆಸಲು ಬಿಡುತ್ತಿಲ್ಲ. ತನ್ನ ಬಗ್ಗೆ ಮಾಧ್ಯಮಗಳಲ್ಲಿ ಹಾಗೂ ಇತರ ವೇದಿಕೆಗಳಲ್ಲಿ ಬ್ಯಾಕ್ ಸೀಟ್ ಡ್ರೈವರ್ ಎನ್ನುವ ಹೇಳಿಕೆಗಳನ್ನೂ ನೀಡುತ್ತಿದ್ದು, ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ರಾಜೇಶ್ ಬನ್ನೂರು ಪ್ರತಿಕ್ರಿಯೆ

ತನ್ನ ವಿರುದ್ಧದ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಸದಸ್ಯ ರಾಜೇಶ್ ಬನ್ನೂರು ಅಧ್ಯಕ್ಷರು ಇತ್ತೀಚೆಗೆ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ನಾನು ಅಧ್ಯಕ್ಷೆಯ ವಿರುದ್ಧ ಜಾತಿ ನಿಂದನೆ ಮಾಡಿದ್ದೇನೆ ಎನ್ನುವುದು ಶುದ್ಧ ಸುಳ್ಳು ಆರೋಪವಾಗಿದೆ. ಆ ಸಭೆಯಲ್ಲಿ ತಾನು ಒಂದು ಶಬ್ದವನ್ನೂ ಅಧ್ಯಕ್ಷೆಯ ವಿರುದ್ಧ ಆಡಿಲ್ಲ. ಅಲ್ಲದೆ ಅಂದು ನಾನು ಅಧ್ಯಕ್ಷರಲ್ಲಿ ಯಾವ ಪ್ರಶ್ನೆಯನ್ನೇ ಕೇಳಿಲ್ಲ. ಇದಕ್ಕೆ ತನ್ನ ಬಳಿ ದಾಖಲೆಯೂ ಇದೆ ಎಂದಿದ್ದಾರೆ.

ಅಧ್ಯಕ್ಷರ ಮೂಲಕ ಮುಖ್ಯಮಂತ್ರಿ ಗಳಿಗೆ ದೂರನ್ನು ನೀಡಿರುವಲ್ಲಿಯೂ ಬ್ಯಾಕ್ ಸೀಟ್ ಡ್ರೈವರ್ ಪಾತ್ರವಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ನಡುವೆ ದೂರಿನ ಕುರಿತು ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ಕಛೇರಿಯಿಂದ ನಗರಸಭಾ ಆಯುಕ್ತರಿಗೆ ನಿರ್ದೇಶನವೂ ಬಂದಿದೆ.

ಪುತ್ತೂರು ನಗರಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪಗಳು ಪ್ರತ್ಯಾರೋಪಗಳು ಸಾಮಾನ್ಯವಾಗಿದೆ.ಇದೀಗ ಹೊಸ ಬೆಳವಣಿಗೆ ಎಂಬಂತೆ ವೈಯಕ್ತಿಕ ಆರೋಪಗಳಿಗೂ ಇದು ತಲುಪಿರುವುದು ಮುಂದಿನ ದಿನಗಳಲ್ಲಿ ಇವುಗಳು ಯಾವ ಮಟ್ಟಕ್ಕೆ ತಲುಪಲಿದೆ ಎನ್ನುವ ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ.

Advertisement
Click to comment

You must be logged in to post a comment Login

Leave a Reply