LATEST NEWS
ಆಭರಣ ಮಳಿಗೆ ಲಾಭಿಗೆ ಬಲಿಯಾಯಿತೇ ಪಕ್ಷಿ ಸಂಕುಲ

ಆಭರಣ ಮಳಿಗೆ ಲಾಭಿಗೆ ಬಲಿಯಾಯಿತೇ ಪಕ್ಷಿ ಸಂಕುಲ
ಪುತ್ತೂರು ಜುಲೈ 30: ಪುತ್ತೂರಿನ ಇತಿಹಾಸ ಪ್ರಸಿದ್ಧ ಗಾಂಧೀಕಟ್ಟೆಯಲ್ಲಿರುವ ಅಶ್ಚಥ ಮರದ ಕೊಂಬೆಗಳನ್ನು ಪುತ್ತೂರು ಪೋಲೀಸರು ಕಡಿದು ಹಾಕಿರುವ ವಿಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಅನುಮತಿಯನ್ನು ಪಡೆಯದೆ ಪೋಲೀಸರು ಈ ಮರದ ಕೊಂಬೆಗಳನ್ನು ಕಡಿದ ಕಾರಣ ಪರಿಸರವಾದಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಪುತ್ತೂರು ನಗರದ ಸರಕಾರಿ ಬಸ್ ನಿಲ್ದಾಣದ ಬಳಿ ಇರುವ ಈ ಗಾಂಧಿಕಟ್ಟೆಯಲ್ಲಿರುವ ಅಶ್ವಥ ಮರದ ಕೊಂಬೆಗಳನ್ನು ಪುತ್ತೂರು ನಗರ ಪೋಲೀಸರು ತಮ್ಮ ಸ್ವಂತ ಹಿತಾಸಕ್ತಿಯಿಂದ ಕಡಿದಿದ್ದಾರೆ. ಈ ಮರವು ನೂರಾರು ಹಕ್ಕಿಗಳ ವಾಸಸ್ಥಾನವಾಗಿದ್ದು, ಮರವನ್ನು ಏಕಾಏಕಿ ಕಡಿದು ಹಾಕಿದ ಪರಿಣಾಮ ಹತ್ತಾರು ಮರಿ ಹಕ್ಕಿಗಳು ಸತ್ತಿದ್ದು, ನೂರಾರು ಹಕ್ಕಿಗಳ ಮೊಟ್ಟೆಗಳು ಒಡೆದುಹೋಗಿವೆ.

ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡದೆಯೇ ಪುತ್ತೂರು ಪೋಲೀಸರು ನಡೆಸಿದ ಕ್ರಮ ಭಾರೀ ವಿವಾದಕ್ಕೂ ಕಾರಣವಾಗಿದೆ. ಹಲವು ವರ್ಷಗಳಿಂದ ಈ ಮರ ಗಾಂಧಿಕಟ್ಟೆಯಲ್ಲಿದ್ದು, ಮರ ಕಡಿಯುವುದಕ್ಕೆ ಪರಿಸರವಾದಿಗಳು ಹಾಗೂ ಹಿರಿಯ ನಾಗರಿಕರು ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನಲೆಯಲ್ಲಿ ಈ ಮರವನ್ನು ಹಾಗೆಯೇ ಬಿಡಲಾಗಿತ್ತು.
ಸರಕಾರಿ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಈ ಮರವು ಹಲವು ಅಂಗಡಿಗಳಿಗೆ ಅಡ್ಡವಾಗುತ್ತದೆ ಎನ್ನುವ ಕಾರಣಕ್ಕಾಗಿ ಮರವನ್ನು ಕಡಿಯಬೇಕೆಂದು ಈ ಅಂಗಡಿ ಮಾಲಿಕರು ಭಾರೀ ಲಾಭಿ ಮಾಡಿದ್ದರು.
ಇದೀಗ ಈ ಕಟ್ಟಡದಲ್ಲಿ ಹೊಸತೊಂದು ಆಭರಣ ಮಳಿಗೆ ಉದ್ಘಾಟನೆಗೊಳ್ಳಲಿದ್ದು, ಇದೇ ಮಳಿಗೆಯ ಲಾಭಿಗೆ ಮಣಿದು ಪೋಲೀಸರು ತಮ್ಮಷ್ಟಕ್ಕೆ ಬಂದು ಮರ ಕಡಿದರೇ ಎನ್ನುವ ಆರೋಪ ಕೇಳಿ ಬರುತ್ತಿದೆ. ಹತ್ತಾರು ವರ್ಷದಿಂದ ಇರುವ ಈ ಮರದ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದ ಪೋಲೀಸರು ಇದೀಗ ಏಕಾಏಕಿ ಬಂದು ಮರ ಕೊಂಬೆಗಳನ್ನು ಕಡಿದಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಮರದ ಕೊಂಬೆಗಳ ಜೊತೆಗೆ ನೂರಾರು ಹಕ್ಕಿಗಳ ಸಂತತಿಯೂ ನಾಶವಾಗಿ ರಸ್ತೆಗೆ ಬಿದ್ದಿರುವ ದೃಶ್ಯ ಎಲ್ಲರ ಮನ ಕಲಕುವಂತಿದೆ.
ಈ ಮರದ ಕೊಂಬೆಯಿಂದಾಗಿ ಟ್ರಾಫಿಕ್ ಗೆ ಸಮಸ್ಯೆಯಾಗುತ್ತಿದೆ ಎನ್ನುವ ಪುತ್ತೂರು ಪೋಲೀಸರ ವಾದವನ್ನು ಯಾವ ರೀತಿಯಾಗಿ ಒಪ್ಪಿಕೊಳ್ಳಬಹುದು ಎನ್ನುವ ಜಿಜ್ಞಾಸೆಯಲ್ಲಿ ಪುತ್ತೂರಿನ ನಾಗರಿಕರಿದ್ದಾರೆ. ವಾಹನಗಳು ರಸ್ತೆಯಲ್ಲಿ ಹೋಗುತ್ತದೆಯೋ ಅಥವಾ ಮರದ ಮೇಲಿಂದ ಹೋಗುತ್ತದೋ ಎನ್ನುವ ಸಂಶಯ ಇದೀಗ ಪೋಲೀಸರ ವಾದದ ಬಳಿಕ ಹುಟ್ಟಿಕೊಂಡಿದೆ.