DAKSHINA KANNADA
ಅಪಘಾತದಲ್ಲಿ ಮಹಿಳೆ ಸಾವು – ಸವಾರನಿಗೆ ದಂಡ ಬೈಕ್ ಮಾಲೀಕನಿಗೆ 2 ವರ್ಷ ಜೈಲು
ಪುತ್ತೂರು ನವೆಂಬರ್ 29: ಎರಡೂವರೆ ವರ್ಷಗಳ ಹಿಂದೆ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಅಪಘಾತ ಮಾಡಿದ ಬೈಕ್ ಸವಾರನಿಗೆ ದಂಡ ವಿಧಿಸಿ, ಬೈಕ್ ಮಾಲೀಕನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಪುತ್ತೂರು ನ್ಯಾಯಾಲಯವು ಆದೇಶಿಸಿದೆ.
ನೆಟ್ಟಣಿಗೆ ಮುಡೂರು ಗ್ರಾಮದ ಕೊಟ್ಯಾಡಿಯಲ್ಲಿ 2022ರ ಫೆ.27ರಂದು ಕೇರಳದ ಮುಳಿಯೂರು ನಿವಾಸಿ ಶಾಹಿದ್ ಎಂಬಾತ ಚಲಾಯಿಸಿಕೊಂಡು ಹೋಗುತ್ತಿದ್ದ ಕೇರಳ ನೋಂದಣಿಯ ಬೈಕ್, ರಸ್ತೆ ಬದಿಯಲ್ಲಿ ನಿಂತಿದ್ದ ಕೊಟ್ಯಾಡಿಯ ದುಗ್ಗಮ್ಮ (55) ಎಂಬುವರಿಗೆ ಡಿಕ್ಕಿಯಾಗಿತ್ತು. ಘಟನೆಯಲ್ಲಿ ದುಗ್ಗಮ್ಮ ಮೃತಪಟ್ಟಿದ್ದರು. ಬೈಕ್ ಹಿಂಬದಿ ಸವಾರೆ ನೆಬಿಸಾ ಗಾಯಗೊಂಡಿದ್ದರು.
ಘಟನೆಗೆ ಸಂಬಂಧಿಸಿ ಸಂಪ್ಯ ಠಾಣೆ ಪೊಲೀಸರು ತನಿಖೆ ನಡೆಸಿದ ವೇಳೆ ಬೈಕ್ ಸವಾರ ಶಾಹಿದ್ ಚಾಲನಾ ಪರವಾನಗಿ ಹೊಂದಿಲ್ಲ ಎಂಬುದು ತಿಳಿದು ಬಂದಿತ್ತು. ಈ ಸಂಬಂಧ ಬೈಕ್ ಮಾಲೀಕ ಮುಳಿಯಾರು ನಿವಾಸಿ ಮಹಮ್ಮದ್ ಶಾಕೀರ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳಿಬ್ಬರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪುತ್ತೂರಿನ ಹೆಚ್ಚುವರಿ ಹಿರಿಯ ವ್ಯಾವಹಾರಿಕ ನ್ಯಾಯಾಧೀಶ ದೇವರಾಜ್ ವೈ.ಎಚ್. ಅವರು, ಬೈಕ್ ಸವಾರ ಶಾಹಿದ್‌ಗೆ ₹ 5 ಸಾವಿರ ದಂಡ, ಬೈಕ್ ಮಾಲೀಕ ಮಹಮ್ಮದ್ ಶಾಕೀರ್‌ಗೆ 2 ವರ್ಷ ಜೈಲು, ₹ 5 ಸಾವಿರ ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ವಾದಿಸಿದ್ದರು.
1 Comment