DAKSHINA KANNADA
ಕಾಸರಗೋಡು : ಮಂಜೇಶ್ವರದ ಹಿರಿಯ ಸಾಹಿತಿ, ವೈದ್ಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ,ನಾನು ಜೀವಂತ ಮತ್ತು ಆರೋಗ್ಯವಾಗಿದ್ದೇನೆ ಡಾ. ಬನಾರಿ ಸ್ಪಷ್ಟನೆ…!
ಕಾಸರಗೋಡು :ಕೇರಳ ಕಾಸರಗೋಡು ಮಂಜೇಶ್ವರದ ಹಿರಿಯ ವೈದ್ಯ, ಸಾಹಿತಿ, ಯಕ್ಷಗಾನ ಕಲಾವಿದರಾದ ಡಾ. ರಮಾನಂದ ಬನಾರಿ ಬಗ್ಗೆ ವಾಟ್ಸಾಪ್ ಗ್ರೂಪ್, ಸ್ಟೇಟಸ್, ಹಾಗೂ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಾವಿನ ಸುದ್ದಿ ಸತ್ಯಕ್ಕೆ ದೂರವಾದುದೆಂದು ಸ್ವತಃ ಡಾ. ರಮಾನಂದ ಬನಾರಿಯವರು ಮಾಧ್ಯಮದ ಮೂಲಕ ಸಮಾಜಕ್ಕೆ ಮಾಹಿತಿ ನೀಡಿದ್ದಾರೆ.
ತಮ್ಮ ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಆರೋಗ್ಯದ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳಿಗೆ ಯಾರು ತಲೆಗೂಡಬಾರದು ನಾನು ಆರೋಗ್ಯವಾಗಿ ಕ್ಷೇಮವಾಗಿ ಇದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಂಜೆಯಿಂದ ಇಲ್ಲಸಲ್ಲದ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಡಾ. ರಮಾನಂದ ಬನಾರಿಯವರ ಛಾಯಾಚಿತ್ರದ ಕೆಳಗೆ RIP ಎಂದು ಬರೆದು ಅಪಪ್ರಚಾರ ಮಾಡಲಾಗಿತ್ತು. ಅದಕ್ಕೆ ಇದೀಗ ಡಾ. ರಮಾನಂದ ಬನಾರಿಯವರೇ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ. ಯಕ್ಷಗಾನ, ಸಾಹಿತ್ಯ ಹಾಗೂ ವೈದ್ಯಕೀಯ ಲೋಕದಲ್ಲಿ ನೀವು ಸಾಕಿ ಬೆಳೆಸಿದ “ಬನಾರಿ” ನಾನು ಚೆನ್ನಾಗಿದ್ದೀನಿ. ನಿಮ್ಮೆಲ್ಲರ ಆಶೀರ್ವಾದ ಬೇಕು. ಗಟ್ಟಿ ಮುಟ್ಟಾಗಿದ್ದೀನಿ, ಯಾವ ಚಿಂತೆಯೂ ಇಲ್ಲಾ. ನಗು ನಗುತ್ತಾ ಚೆನ್ನಾಗಿದ್ದೀನಿ, ಆರಾಮವಾಗಿ ನನ್ನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಂಜೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಸಾಲ್ಯಾನ್ ರವರು ಬನಾರಿ ಜೊತೆ ಸಮಾಲೋಚನೆ ನಡೆಸಿ ಆರೋಗ್ಯದ ಬಗ್ಗೆ ವಿಚಾರಿಸಿ ಕ್ಷೇಮದಿಂದ ಇದ್ದಾರೆಂದು ಮಾಹಿತಿಯನ್ನು ಕೂಡಾ ನೀಡಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿವ ಸುಳ್ಳು ವದಂತಿಗೆ ಬ್ರೇಕ್ ಹಾಕಿದ್ದಾರೆ. “ಯಾರೂ ಕೂಡಾ ಬಾನಾರಿಯವರ ಬಗ್ಗೆ ಇರುವ ಸುಳ್ಳು ಸುದ್ದಿಗೆ ತಲೆತೂಗಬಾರದು, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಉಮೇಶ್ ಸಾಲ್ಯಾನ್ ರವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.