ಫೆಬ್ರವರಿ 14 ನಮಗೆಲ್ಲಾ ಕತ್ತಲೆ ದಿನ – ಪವರ್ ಸ್ಟಾರ್ ಪುನೀತ್ ರಾಜಕುಮಾರ್

ಉಡುಪಿ ಫೆಬ್ರವರಿ 16: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಕಳೆದುಕೊಂಡ ದಿನ ನಮಗೆಲ್ಲಾ ಕತ್ತಲೆ ದಿನ ಎಂದು ಚಿತ್ರನಟ ಪುನೀತ್ ರಾಜಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನಗೈದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಮಗೋಸ್ಕರ ಗಡಿಭಾಗದಲ್ಲಿ ಯೋಧರು ಕಷ್ಟಪಡ್ತಾರೆ. ಯೋಧರ ಬಗ್ಗೆ ನಾನು ಏನು ಮಾತಾಡಿದ್ರೂ ಅದು ಕಮ್ಮಿಯಾಗ್ತದೆ. ಮಂಡ್ಯ ಮೂಲದ ನಮ್ಮ ಹೆಮ್ಮೆಯ ಯೋಧನನ್ನು ಕಳೆದುಕೊಂಡಿದ್ದೇವೆ. ಒಂದು ಕಡೆಯಿಂದ ನಮಗೆ ದುಖವಾಗ್ತಿದೆ. ನಮಗೇನೂ ಮಾಡೋಕೆ ಆಗ್ತಿಲ್ಲ ಎನ್ನುವ ನೋವೂ ಆಗ್ತಿದೆ ಎಂದರು.

ಕೇಂದ್ರ ಸರ್ಕಾರ ಈ ಹೊತ್ತಲ್ಲಿ ಏನ್ಮಾಡ್ತಿದೆ ಎನ್ನುವುದು ಮುಖ್ಯವಲ್ಲ. ನಾವು, ನಮ್ಮ ಕುಟುಂಬ ಈ ದೇಶಕ್ಕೆ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಎಲ್ಲರೂ ಸೇರಿ ಈ ದೇಶಕ್ಕಾಗಿ ಏನಾದರೂ ಮಾಡೋಣ ಎಂದು ಪುನೀತ್ ಕರೆ ನೀಡಿದರು. ಇದೇ ಸಂದರ್ಭ ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ದರ್ಶನ ಮಾಡಿದ ಪವರ್ ಸ್ಟಾರ್, ಹುತಾತ್ಮ ಯೋಧರ ಆತ್ಮ ಶಾಂತಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದರು.

ಅಪ್ಪಾಜಿ ಜೊತೆ ಹಲವು ಬಾರಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದೆ. ಆ ದಿನಗಳು ಯಾವತ್ತಿಗೂ ಮರೆಯೋಕೆ ಆಗಲ್ಲ. ‘ನಟಸಾರ್ವಭೌಮ’ ಚಿತ್ರ ಗೆಲ್ಲಿಸಿದ್ದಕ್ಕೆ ಕನ್ನಡ ಪ್ರೇಕ್ಷಕರಿಗೆ ಇದೇ ಸಂದರ್ಭದಲ್ಲಿ ಪುನೀತ್ ರಾಜ್‍ಕುಮಾರ್ ಧನ್ಯವಾದ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕೃಷ್ಣ ಮಠದಲ್ಲಿ ಪರ್ಯಾಯ ಸ್ವಾಮೀಜಿಯವರು ಯೋಜಿಸಿರುವ ಸುವರ್ಣ ಗೋಪುರದ ಮಾದರಿಯನ್ನು ದೀಪ ಬೆಳಗಿಸಿ, ಹುಂಡಿಗೆ ಚಿನ್ನದ ಕಾಣಿಕೆಯನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.

VIDEO

Facebook Comments

comments