LATEST NEWS
6 ವರ್ಷಗಳಲ್ಲಿ ಮುಗಿಯದ ಪಂಪ್ ವೆಲ್ ಪ್ಲೈಓವರ್ ಇನ್ನು 6 ತಿಂಗಳಲ್ಲಿ ಸಾಧ್ಯನಾ ?

6 ವರ್ಷಗಳಲ್ಲಿ ಮುಗಿಯದ ಪಂಪ್ ವೆಲ್ ಪ್ಲೈಓವರ್ ಇನ್ನು 6 ತಿಂಗಳಲ್ಲಿ ಸಾಧ್ಯನಾ ?
ಮಂಗಳೂರು ಅಗಸ್ಟ್ 9: ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದ್ದ ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಮತ್ತೆ ಪ್ರಾರಂಭವಾಗಿದೆ. ಸಾರ್ವಜನಿಕರ ತೀವ್ರ ಆಕ್ರೋಶ, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದ ಟ್ರೋಲ್ ಗಳ ಅಲ್ಲದೆ ರಾಜಕೀಯ ಪಕ್ಷಗಳ ಪ್ರತಿಭಟನೆ ಹಿನ್ನಲೆಯಲ್ಲಿ ಗುತ್ತಿಗೆದಾರರು ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ.
ನಂತೂರು- ತಲಪಾಡಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವೇಳೆ ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಸರಿಸುಮಾರು ಎಂಟು ವರ್ಷಗಳೇ ಕಳೆದಿದೆ. ಕಳೆದ ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಈ ಪ್ಲೈಓವರ್ ಕಾಮಗಾರಿ, ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ.

ಪಂಪ್‌ವೆಲ್ ಫ್ಲೈಓವರ್ ಸುಮಾರು 600 ಮೀಟರ್ ಉದ್ದ ಹಾಗೂ 20 ಮೀಟರ್ ಅಗಲವಿರಲಿದೆ. ನಂತೂರು ಭಾಗದಿಂದ ಬರುವಾಗ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಮುಂಭಾಗದಿಂದ, ಇಂಡಿಯಾನ ಆಸ್ಪತ್ರೆಯ ಮುಂಭಾಗದವರೆಗೆ ಫ್ಲೈಓವರ್ ನಿರ್ಮಾಣವಾಗಲಿದೆ. ಕೇವಲ 600 ಮೀಟರ್ ಅಗಲದ ಪ್ಲೈಓವರ್ ನಿರ್ಮಾಣಕ್ಕೆ 6 ವರ್ಷಗಳು ಬೇಕಾಗಿತ್ತಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರು, ಹೆದ್ದಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಳೆದ ಐದು ವರ್ಷಗಳಿಂದಲೂ ಮುಂದಿನ ಜನವರಿ, ಮಾರ್ಚ್ ಎಂಬ ಗಡು ಕೊಡುತ್ತಲೇ ಬಂದಿದ್ದಾರೆ. ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೂ ಮಾರ್ಚ್‌ಗೆ ಸಿದ್ಧಪಡಿಸಲು ನವಯುಗ ಕಂಪನಿಗೆ ಗಡು ನೀಡಿದ್ದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಈಗ ಆಗಸ್ಟ್ ಬಂದರೂ ಕಾಮಗಾರಿ ಮುಗಿಸಿಲ್ಲ. ಈಗ ಜನವರಿ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದು, ಇದು ಸಾದ್ಯವೇ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿರ್ಮಾಣ ಹಂತದ ಮೇಲ್ಸೇತುವೆಯ ಒಂದು ಕಿಂಡಿಯಲ್ಲಿ ಮಂಗಳವಾರದಿಂದ ಸಂಚಾರ ನಿರ್ಬಂಧಿಸಿ, ಇನ್ನೊಂದೆಡೆ ಕಿಂಡಿಗೆ ಡಾಮರು ಹಾಕಿದ ತಾತ್ಕಾಲಿತವಾಗಿ ದುರಸ್ತಿಪಡಿಸಿ ಅದರಲ್ಲಿ ಸಂಚಾರ ಆರಂಭಿಸಲಾಗಿದೆ. ಆ ಮೂಲಕ ಸಂಚಾರ ನಿರ್ಬಂಧ ಮಾಡಿರುವಲ್ಲಿ ಗರ್ಡರ್ ಮತ್ತು ಸ್ಪ್ಯಾಬ್ ಹಾಕಲು ಸೆಂಟ್ರಿಂಗ್ ಪೋಲ್ ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ.