LATEST NEWS
ಟ್ರೈನಿಂಗ್ ನಲ್ಲೇ ಅಹಂಕಾರ ತೋರಿಸಿ ಇದೀಗ ಐಎಎಸ್ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಪೂಜಾ ಖೇಡ್ಕರ್
ಮುಂಬೈ ಜುಲೈ 20: ಟ್ರೈನಿಂಗ್ ಅವಧಿಯಲ್ಲೇ ತನ್ನ ಅಹಂಕಾರ ತೋರಿಸಿ ಇದೀಗ ಐಎಎಸ್ ಹುದ್ದೆಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಬಂದಿದ್ದಾರೆ. ಅವರು ನೀಡಿರುವ ದಾಖಲಾತಿಗಳು ನಕಲಿ ಎಂಬ ಆರೋಪದ ಹಿನ್ನಲೆ ಇದೀಗ ಅವರ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಎಫ್‌ಐಆರ್ ದಾಖಲು ಮಾಡಿದೆ.
2022ರಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಪೂಜಾ ಖೇಡ್ಕರ್, ಈ ಪರೀಕ್ಷೆಯಲ್ಲಿ ಆಯ್ಕೆಯಾಗಿ ಐಎಎಸ್ ತರಬೇತಿ ಶಾಲೆಯಲ್ಲಿ ತರಬೇತಿ ಪೂರ್ಣಗೊಳಿಸಿ ಪ್ರೊಬೆಷನರಿ ಅಧಿಕಾರಿಯಾಗಿ ನಿಯುಕ್ತರಾಗಿದ್ದರು. ಆದರೆ, ಅವರ ವಿರುದ್ಧ ಅಕ್ರಮ ದಾಖಲೆ ಸಲ್ಲಿಕೆ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಮಾಡಿದ ಯುಪಿಎಸ್‌ಸಿ, ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಅಭ್ಯರ್ಥಿತನ ರದ್ದು ಮಾಡಲು ಮುಂದಾಗಿದೆ.
ಪೂಜಾ ಖೇಡ್ಕರ್ ಅವರು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಹಲವು ಅಕ್ರಮ ಮಾರ್ಗಗಳನ್ನು ಅನುಸರಿಸಿರೋದು ದೃಢಪಟ್ಟಿದೆ. ಅವರ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಫೋಟೋ, ಸಹಿ, ಇ ಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ಮನೆ ವಿಳಾಸದ ನಕಲಿ ದಾಖಲೆ ನೀಡಿರೋದು ಸಾಬೀತಾಗಿದೆ. ಅಷ್ಟೇ ಅಲ್ಲ, ನಿಗದಿತ ಮಿತಿಗಿಂತ ಹೆಚ್ಚು ಬಾರಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿರೋದೂ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಪೂಜಾ ಖೇಡ್ಕರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವ ಯುಪಿಎಸ್‌ಸಿ, ಅವರ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಿದೆ. 2022ರಲ್ಲಿ ಆಯ್ಕೆಯಾದ ಅವರ ಅಭ್ಯರ್ಥಿತನವನ್ನು ರದ್ದು ಮಾಡುವ ಕುರಿತಾಗಿ ಶೋಕಾಸ್ ನೋಟಿಸ್ (ಕಾರಣ ಕೇಳಿ ನೋಟಿಸ್) ಕೂಡಾ ಜಾರಿ ಮಾಡಿದೆ. ಜೊತೆಯಲ್ಲೇ ಭವಿಷ್ಯದಲ್ಲಿ ಪೂಜಾ ಖೇಡ್ಕರ್ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳೋದಕ್ಕೆ, ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗಿಯಾಗೋದಕ್ಕೆ ನಿರ್ಬಂಧ ಹೇರೋದಕ್ಕೂ ತೀರ್ಮಾನಿಸಿದೆ.