LATEST NEWS
ಪಿಯುಸಿ ವಿಧ್ಯಾರ್ಥಿನಿ ಅತ್ಯಾಚಾರಗೈದ ಇಬ್ಬರು ಅಪರಾಧಿಗಳಿಗೆ 20 ವರ್ಷ ಕಾರಾಗೃಹ ಶಿಕ್ಷೆ
ಮಂಗಳೂರು ಜೂನ್ 14: ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಪಿಯುಸಿ ವಿಧ್ಯಾರ್ಥಿನಿಯನ್ನು ಪುಸಲಾಯಿಸಿ ಅಪಹರಣ ಮಾಡಿ ಅತ್ಯಾಚಾರಗೈದಿರುವ ಇಬ್ಬರು ಅಪರಾಧಿಗಳಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎಫ್‌ಟಿಎಸ್‌ಸಿ-2 ನ್ಯಾಯಾಲಯವು 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅತ್ಯಾಚಾರದ ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಕಾವಳಗದ್ದೆಯ ಸಚಿನ್ ಸಂತೋಷ್ ನಾಯ್ಕ (22) ಮತ್ತು ಹಟ್ಟಿಕೆರೆಯ ಪ್ರವೀಣ್ ಜಯಪಾಲ್ ನಾಯ್ಕ (33) ಎಂದು ಗುರುತಿಸಲಾಗಿದೆ.
2022ರ ಏಪ್ರಿಲ್ 12ರ ಮಧ್ಯಾಹ್ನ 12.45ಕ್ಕೆ ಪಿಯುಸಿ ವಿದ್ಯಾರ್ಥಿನಿಯಾದ ಬಾಲಕಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹರಿಯಾಣಕ್ಕೆ ಹೋಗುವ ಟಿಕೆಟ್ ಪಡೆಯಲೆಂದು ನಿಂತಿದ್ದಳು. ಅಲ್ಲಿಗೆ ಬಂದ ದುರುಳ ಆಕೆಯಲ್ಲಿ ಟಿಕೆಟ್ ಮಾಡಿಸಿಕೊಡುವುದಾಗಿ ಹೇಳಿದ್ದಾನೆ. ಬಳಿಕ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವಂತೆ ನಟಿಸಿ ‘ಇಲ್ಲಿ ಟಿಕೆಟ್ ದೊರಕುವುದಿಲ್ಲ. ಕಾರವಾರದಲ್ಲಿ ಟಿಕೆಟ್ ತೆಗೆಸಿಕೊಡುತ್ತೇವೆ. ಅಲ್ಲಿಗೆ ಹೋಗೋಣ’ ಎಂದು ನಂಬಿಸಿ ರೈಲಿನಲ್ಲಿ ಕರೆದುಕೊಂಡು ಹೋಗಿದ್ದಾನೆ.ಅಂಕೋಲಾದಲ್ಲಿ ಆಕೆಯನ್ನು ಪ್ರವೀಣ್ ಜಯಪಾಲ್ ನಾಯ್ಕ ಎಂಬಾತನ ಮನೆ ಮತ್ತು ಲಾಡ್ಜ್‌ಗೆ ಕರೆದೊಯ್ದು ಇಬ್ಬರೂ ಅತ್ಯಾಚಾರ ಎಸಗಿದ್ದಾರೆ. ಬಳಿಕ ಏಪ್ರಿಲ್ 14ರಂದು ಆಕೆಯನ್ನು ಮಂಗಳೂರು ರೈಲು ನಿಲ್ದಾಣಕ್ಕೆ ಕರೆತಂದು ಬಿಟ್ಟಿದ್ದರು. ರೈಲು ನಿಲ್ದಾಣದಲ್ಲಿ ಕುಳಿತಿದ್ದ ಬಾಲಕಿಯನ್ನು ಗಮನಿಸಿದ ರೈಲ್ವೆ ಪೊಲೀಸರು ಸಂಶಯಗೊಂಡು ವಿಚಾರಿಸಿದ್ದಾರೆ. ಈ ವೇಳೆ ಆರೋಪಿಗಳು ಅತ್ಯಾಚಾರ ಎಸಗಿರುವ ಬಗ್ಗೆ ಬಾಲಕಿ ತಿಳಿಸಿದ್ದಾಳೆ. ತಕ್ಷಣ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್-2 ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಪೋಕ್ಸೊ ಕಾಯಿದೆಯನ್ವಯ ಇಬ್ಬರಿಗೂ ತಲಾ 20 ವರ್ಷ ಕಠಿಣ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಒಂದು ವರ್ಷ ಕಠಿಣ ಸಜೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ ವಾದಿಸಿದ್ದರು.