LATEST NEWS
ಬಾಂಬರ್ ಆದಿತ್ಯ ರಾವ್ ನಂತೆ ಪ್ರಚಾರಗಿಟ್ಟಿಸಲು ಹೋಗಿ ಜೈಲು ಸೇರಿದ ಭೂಪ

ಮಂಗಳೂರು ಅಗಸ್ಟ್ 21: ಕಳೆದ ಜನವರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಬಾಂಬರ್ ಆದಿತ್ಯ ರಾವ್ ನಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಬೇಕೆಂದು ಪ್ರಯತ್ನಿಸಿ ವ್ಯಕ್ತಿಯೊಬ್ಬ ಜೈಲು ಪಾಲಾದ ಘಟನೆ ನಡೆದಿದೆ. ಪ್ರಚಾರದ ತೆವಲಿಗೆ ಕೆಲವರು ಯಾವ ಮಟ್ಟಕ್ಕೂ ಇಳಿಯುತ್ತಾರೆ ಎನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿ ಕೇವಲ ಪ್ರಚಾರಕ್ಕಾಗಿ ತಾನು ಈ ಕೃತ್ಯ ಎಸಗಿರುವುದಾಗಿ ಪೋಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ತನ್ನ ಪ್ರಚಾರದ ಹುಚ್ಚಿಗೆ ಈತ ಇದೀಗ ಜೈಲಿನ ಕಂಬಿ ಎಣಿಸಲು ಆರಂಭಿಸಿದ್ದಾನೆ. ಕೇವಲ ಎಂಟನೇ ತರಗತಿ ಓದಿರುವ ಈತ ಬಾಂಬರ್ ಆದಿತ್ಯ ರಾವ್ ನನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡು ಮಾಡಿರುವ ಕೆಲಸ ಪೊಲೀಸರನ್ನೆ ಬೆಚ್ಚಿಬಿಳಿಸಿದೆ.

ಆಗಸ್ಟ್ 19 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಾದ ವಾಸುದೇವ್ ರಾವ್ ಅವರಿಗೆ ಒಂದು ಮೊಬೈಲು ಕರೆ ಬರುತ್ತೆ. ಈ ಕರೆ ಮಾಡಿದ ವ್ಯಕ್ತಿ ತಾನು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಮಾಹಿತಿ ನೀಡುತ್ತಾನೆ. ತಕ್ಷಣವೇ ಪ್ರಕರಣದ ಗಂಭೀರತೆಯನ್ನು ಮನವರಿಕೆ ಮಾಡಿಕೊಂಡ ಮಾಜಿ ನಿರ್ದೇಶಕರು ಈ ವಿಚಾರವನ್ನು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರ ಗಮನಕ್ಕೆ ತರುತ್ತಾರೆ.
ವಿಮಾನ ನಿಲ್ದಾಣದಿಂದ ಮಂಗಳೂರು ಪೋಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿ , ಬಾಂಬ್ ಕರೆಯ ಜಾಡನ್ನು ಪತ್ತೆ ಹಚ್ಚಲು ಪೋಲೀಸರು ಆರಂಭಿಸುತ್ತಾರೆ. ಮೊಬೈಲ್ ಸಂಖೆಯನ್ನು ಬೆನ್ನತ್ತಿ ಹೋದ ಮಂಗಳೂರು ಪೋಲೀಸರಿಗೆ ಈ ಕರೆ ಉಡುಪಿ ಜಿಲ್ಲೆಯ ಮುದ್ರಾಡಿ ಪರಿಸರದಿಂದ ಬಂದಿರುವುದು ತಿಳಿದು ಬರುತ್ತದೆ. ಮುದ್ರಾಡಿಯ ಪೊಯ್ಯುದಲ್ ಬಲ್ಲಾಡಿ ನಿವಾಸಿ ವಸಂತ ಕೃಷ್ಣ ಶೇರಿಗಾರ (33) ನಿಗೆ ಸೇರಿದ ಮೊಬೈಲ್ ಸಂಖ್ಯೆ ಆಗಿರುವುದನ್ನು ಪತ್ತೆ ಹಚ್ಚಿದ ಪೋಲೀಸರು ಆತನನ್ನು ಬಂಧಿಸಿ ಮಂಗಳೂರಿಗೆ ತಂದು ವಿಚಾರಣೆ ನಡೆಸುತ್ತಾರೆ. ವಿಚಾರಣೆಯ ವೇಳೆಗೆ ಮಂಗಳೂರು ಪೋಲೀಸರೇ ಆರೋಪಿಯ ಹೇಳಿಕೆ ಕೇಳಿ ಬಿಚ್ಚಿ ಬೀಳುತ್ತಾರೆ.
ಹೌದು ಈತ ಈ ಕೃತ್ಯ ಮಾಡಿರುವುದು ಕೇವಲ ಪ್ರಚಾರಕ್ಕಾಗಿ. ಪೋಲೀಸ್ ತನಿಖೆಯ ವೇಳೆ ಈತ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದು, ಪ್ರಚಾರ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾನೆ. ಜನವರಿ ತಿಂಗಳಿನಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಎನ್ನುವ ವ್ಯಕ್ತಿ ಸ್ಪೋಟಕವೊಂದನ್ನು ಇರಿಸಿ ದೇಶ ಹಾಗೂ ವಿದೇಶಗಳಲ್ಲಿ ಒಂದೇ ದಿನದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ. ಇದನ್ನೇ ರೋಲ್ ಮಾಡಲ್ ಆಗಿ ತೆಗೆದುಕೊಂಡ ಆರೋಪಿ ವಸಂತ್ ಗೂಗಲ್ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂಬರ್ ಹುಡುಕಿದ್ದಾನೆ. ಕೇವಲ 8 ನೇ ತರಗತಿ ಕಲಿತಿರುವ ಈತನಿಗೆ ಗೂಗಲ್ ನಲ್ಲಿ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಾದ ವಾಸುದೇವ್ ರಾವ್ ನಂಬರ್ ಸಿಕ್ಕಿದೆ. ಅವರನ್ನೇ ನಿಲ್ದಾಣದ ನಿರ್ದೇಶಕರು ಎಂದು ತಿಳಿದು ಆತ ಬೆದರಿಕೆಯ ಕರೆ ಮಾಡಿದ್ದಾನೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ, ಹಾಗೂ ಇತರ ಸೆಕ್ಷನ್ ಮೂಲಕ ಆರೋಪಿಯನ್ನು ಮಂಗಳೂರು ಪೋಲೀಸರು ಬಂಧಿಸಿದ್ದಾರೆ. ಜಾಮೀನುರಹಿತ ಸೆಕ್ಷನ್ ಮೇಲೆ ಆರೋಪಿಯನ್ನು ಬಂಧಿಸಿರುವ ಪೋಲೀಸರು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.