DAKSHINA KANNADA
ಬೆಳ್ಳಂಬೆಳಿಗ್ಗೆ 4 ಗಂಟೆಗೆ ಪುತ್ತೂರಿನಲ್ಲಿ ಬ್ಯಾಂಕ್ ಗಳ ಮುಂದೆ ಜನರ ಸಾಲು

ಬೆಳ್ಳಂಬೆಳಿಗ್ಗೆ 4 ಗಂಟೆಗೆ ಪುತ್ತೂರಿನಲ್ಲಿ ಬ್ಯಾಂಕ್ ಗಳ ಮುಂದೆ ಜನರ ಸಾಲು
ಮಂಗಳೂರು ಸೆಪ್ಟೆಂಬರ್ 21: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನ ಈಗ ಬೆಳ್ಳಂಬೆಳಿಗ್ಗೆ ಬ್ಯಾಂಕ್ ಗಳ ಮುಂದೆ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆಧಾರ್ ಕಾರ್ಡ್ ಮಾಡಿಸಲು ಸಾರ್ವಜನಿಕರು ಪ್ರತಿದಿನ ಬ್ಯಾಂಕ್ ಗಳ ಮುಂದೆ ಮುಂಜಾನೆ 4 ಗಂಟೆಯಿಂದಲೇ ನಿಂತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಆಧಾರ್ ಕಾರ್ಡ್ ಗಾಗಿ ಜನರು ನಿದ್ದೆಗೆಟ್ಟು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಬೆಳಿಗ್ಗೆ 4 ಗಂಟೆಯಿಂದಲೇ ಜನರು ಆಧಾರ್ ಕಾರ್ಡ್ ಗೆ ಟೊಕನ್ ಕೊಡುವ ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯ ಕಾಣ ಸಿಗುತ್ತಿದೆ. ಪುತ್ತೂರಿನಲ್ಲಿ ಇದು ದಿನನಿತ್ಯದ ಗೋಳಾಗಿದ್ದು, ಮುಂಜಾನೆ 4 ಗಂಟೆಯಿಂದ ಕಾದರೂ ಕೂಡ ಆದಾರ್ ಟೋಕನ್ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಗಳು ಬೆಳಗ್ಗೆ 10ಗಂಟೆಗೆ ತೆರೆದರೂ ಕೂಡ ಮುಂಜಾನೆಯಿಂದಲೇ ಬ್ಯಾಂಕ್ ಆವರಣದ ಮುಂದೆಯೇ ಕಾದು ಕಾದು ಸುಸ್ತಾಗಿ ಕುಳಿತಿರುವ ಮಹಿಳೆಯರು, ವೃದ್ಧರು ಕಾಣಬಹುದಾಗಿದೆ. ಆದರೂ ಬೆಳಿಗ್ಗೆ 4 ಗಂಟೆಯಿಂದಲೇ ಸಾಲುಗಟ್ಟಿ ನಿಂತರೂ ಕೂಡ ಟೊಕನ್ ಸಿಗದೆ ವಾಪಾಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಪುತ್ತೂರಿನ SBI ಬ್ಯಾಂಕ್ 60 ಟೋಕನ್, ಕರ್ನಾಟಕ ಬ್ಯಾಂಕ್ 30 ಟೋಕನ್, ಮಿನಿ ವಿಧಾನಸೌಧ 15 ಟೋಕನ್ ವಿತರಣೆ ಮಾಡಲಾಗುತ್ತಿದೆ. ಟೋಕನ್ ಸಿಗದವರು ಮತ್ತೆ ಮನೆಗೆ ತೆರಳಬೇಕಾದ ಪರಿಸ್ಥಿತಿ ಇದ್ದು, ಮತ್ತೆ ಮರುದಿನ ಮುಂಜಾನೆಯಿಂದ ಇದೇ ಗೋಳು. ಈ ಕುರಿತಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಿಗೆ ತಿಳಿಸಿದರೂ ಕೂಡ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.