LATEST NEWS
ಬೇಸಿಗೆ ರಜೆ ನೀಡದ ಸಂತ ಅಲೋಶಿಯಸ್ ಕಾಲೇಜು ವಿರುದ್ಧ ತಿರುಗಿ ಬಿದ್ದ ವಿದ್ಯಾರ್ಥಿಗಳು
ಬೇಸಿಗೆ ರಜೆ ನೀಡದ ಸಂತ ಅಲೋಶಿಯಸ್ ಕಾಲೇಜು ವಿರುದ್ಧ ತಿರುಗಿ ಬಿದ್ದ ವಿದ್ಯಾರ್ಥಿಗಳು
ಮಂಗಳೂರು, ಮೇ 1: ವಾರ್ಷಿಕ ಪರೀಕ್ಷೆ ಕಳೆದ ಬಳಿಕ ಸಿಗುವ ರಜಾದಲ್ಲಿ ಮಜಾ ಮಾಡಬಹುದೆನ್ನುವ ವಿದ್ಯಾರ್ಥಿಗಳ ಲೆಕ್ಕಾಚಾರಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಎಳ್ಳುನೀರು ಬಿಟ್ಟಿದೆ.
ಪದವಿ ಪೂರ್ವ ಶಿಕ್ಷಣ ಮಂಡಳಿಯ ಆದೇಶವನ್ನು ಧಿಕ್ಕರಿಸಿ ಈ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿ ನಡೆಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಾಲೇಜಿನ ಈ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಮೇ 2 ರಂದು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆಯನ್ನು ನಡೆಸಲು ಸಿದ್ಧತೆಯನ್ನೂ ನಡೆಸಿದ್ದಾರೆ.
ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯದ ಎಲ್ಲಾ ಪಿ.ಯು ಕಾಲೇಜಿನ ಮಕ್ಕಳಿಗೆ ಇದ್ದಂತೆ ಪರೀಕ್ಷೆಗಳು ನಡೆದಿದ್ದು, ಫೆಬ್ರವರಿ 21 ರಂದು ಪರೀಕ್ಷೆಯು ಮುಕ್ತಾಯಗೊಂಡಿದೆ. ಪಿಯು ಬೋರ್ಡ್ ನಿಯಮದ ಪ್ರಕಾರ ಫೆಬ್ರವರಿ 21 ರ ಬಳಿಕ ಮೇ 2 ರ ವರೆಗೆ ಅಂತರೆ ಸುಮಾರು 69 ದಿನಗಳ ಕಾಲ ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತದೆ.
ಆದರೆ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ತಕ್ಷಣವೇ ದ್ವಿತೀಯ ಪಿಯುಸಿ ತರಗತಿಯನ್ನು ಆರಂಭಿಸಿತ್ತು. ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ಕೂಡಲೇ ದ್ವಿತೀಯ ಪಿಯುಸಿಯ ಪಾಠಗಳನ್ನು ಪ್ರಾರಂಭ ಮಾಡಿದ ಕಾಲೇಜು ಆಡಳಿತ ಮಂಡಳಿ , ರಾಜ್ಯದ ಪಿಯು ಬೋರ್ಡ್ ನ ಆದೇಶವನ್ನು ದಿಕ್ಕರಿಸಿರುವುದು ಇಲ್ಲಿ ಸ್ಪಷ್ಟವಾಗಿದೆ. ನಂತರ ಎಪ್ರಿಲ್ 12 ರವರೆಗೆ ತರಗತಿ ನಡೆಸಿದ ಆಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಎಪ್ರಿಲ್ 13 ರಿಂದ ವಿಧ್ಯಾರ್ಥಿಗಳಿಗೆ ಬೇಸಿಗೆ ರಜೆ ನೀಡಿದೆ.
ಆದರೆ ಈಗ ಪಿಯು ಬೋರ್ಡ್ ಆದೇಶದ ಪ್ರಕಾರ ಮತ್ತೆ ಮೇ 2 ರಂದು ತರಗತಿ ಆರಂಭಿಸುವುದಾಗಿ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಯಲ್ಲಿ ಹಾಜರಿರುವಂತೆ ಫರ್ಮಾನನ್ನೂ ಹೊರಡಿಸಿದೆ.
ಕಾಲೇಜಿನ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಇತರ ಕಾಲೇಜುಗಳು ವಿಧ್ಯಾರ್ಥಿಗಳಿಗೆ ಸಂಪೂರ್ಣ ಬೇಸಿಗೆ ರಜೆಯನ್ನು ನೀಡಿದ್ದು, ಅಲೋಶಿಯಸ್ ಕಾಲೇಜು ಮಾತ್ರ ನಮಗೆ ರಜೆಯನ್ನು ನೀಡಿಲ್ಲ ಎಂದು ವಿಧ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಮಕ್ಕಳ ಮೂಲಭೂತ ಹಕ್ಕನ್ನೆ ಕಸಿದುಕೊಳ್ಳಲು ಹೊರಟಿದೆ ಎಂದು ವಿಧ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ರಜೆಯನ್ನು ನೀಡದೆ ಯಾವುದೇ ಕಾರಣಕ್ಕೂ ತರಗತಿಗೆ ಹಾಜರಾಗುವುದಿಲ್ಲ ಎನ್ನುವ ಸಂದೇಶವನ್ನೂ ವಿದ್ಯಾರ್ಥಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸುತ್ತಿದ್ದಾರೆ.
ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ change.org ನಲ್ಲಿ ಪ್ರತಿಭಟನೆ ನಡೆಸುವ ಕುರಿತಂತೆ ಪಿಟಿಷನ್ ಸಿದ್ಧಪಡಿಸಿದ್ದಾರೆ.
ಈ ಪಿಟಿಷನ್ ಗೆ ಈಗಾಗಲೇ 360 ವಿದ್ಯಾರ್ಥಿಗಳು ತಮ್ಮ ಸಹಿ ಹಾಕುವ ಮೂಲಕ ಸಹಮತ ವ್ಯಕ್ತಪಡಿಸಿದ್ದಾರೆ.
ಶಿಕ್ಷಣದ ಹೆಸರಿನಲ್ಲಿ ಈ ರೀತಿ ಮಕ್ಕಳ ಮೇಲೆ ನಡೆಸುತ್ತಿರುವ ಮಾನಸಿಕ ದೌರ್ಜನ್ಯದ ಕುರಿತು ಸಂಬಂಧಪಟ್ಟ ಇಲಾಖೆಗಳು ಕಾಲೇಜು ಆಡಳಿತ ಮಂಡಳಿಯ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳೂ ಇದೀಗ ಕೇಳಿ ಬರುತ್ತಿದೆ.
ಲಕ್ಷಾಂತರ ರೂಪಾಯಿ ಡೊನೇಶನ್ ಪಡೆದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ಕಾಲೇಜು ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬೇಕಾದಂತಹ ಮಾನಸಿಕ ನೆಮ್ಮದಿಯನ್ನು ನೀಡದೆ ವಂಚಿಸುತ್ತಿದೆ ಎನ್ನುವ ಆರೋಪಗಳೂ ವಿದ್ಯಾರ್ಥಿಗಳಿಂದಲೇ ಕೇಳಿ ಬರುತ್ತಿದೆ.
ವಿದ್ಯಾರ್ಥಿಗಳನ್ನು ಮಾಲ್ ಗಳಲ್ಲಿ ಡ್ಯಾನ್ಸ್ ಮಾಡಿಸಿ ಚಂದಾ ಎತ್ತುವುದರಿಂದ ಹಿಡಿದು ತನ್ನ ಅವಶ್ಯಕತೆಗಳಿಗಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಸಂತ ಅಲೋಶಿಯಸ್ ಕಾಲೇಜು ಮಂಡಳಿಯ ಇಂಥ ನಡವಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ.