KARNATAKA
ಮೀಸಲಾತಿ ಗಲಾಟೆ – ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ

ಶಿವಮೊಗ್ಗ ಮಾರ್ಚ್ 27: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತ ಹಿನ್ನೆಲೆ ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪೊಲೀಸರು ಪ್ರತಿಭಟನಾಕಾರರ ವಿರುದ್ದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ ಶಿಕಾರಿಪುರ ಪಟ್ಟಣದಲ್ಲಿ ಸೋಮವಾರ ಬಂಜಾರ ಸಮಾಜದವರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭಾವಚಿತ್ರದ ಪ್ಲೆಕ್ಸ್ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರ ಮನೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಪ್ರತಿಭಟನಾಕಾರರು ಯಡಿಯೂರಪ್ಪ ಮನೆಯತ್ತ ಕಲ್ಲು ತೂರಾಟ ನಡೆಸಿದ್ದಾರೆ. ಬ್ಯಾರಿಕೇಡ್ ಗಳನ್ನು ದಾಟಿ ಯಡಿಯೂರಪ್ಪ ಮನೆಗೆ ಪ್ರತಿಭಟನಾಕಾರರು ನುಗ್ಗುವುದನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.