LATEST NEWS
ಭತ್ತಕ್ಕೆ ಕನಿಷ್ಠ ಬೆಂಬಲ ನಿಗದಿಗೆ ಆಗ್ರಹಿಸಿ ರೈತರ ವಿಶಿಷ್ಠ ಪ್ರತಿಭಟನೆ

ಉಡುಪಿ ನವೆಂಬರ್ 06: ಭತ್ತಕ್ಕೆ 2500 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಉಡುಪಿ ಜಿಲ್ಲೆಯಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭತ್ತದ ಫಸಲು ಬಡಿಯುವ ಮಂಚ ಇಟ್ಟು ಫಸಲಿನಿಂದ ತೆನೆ ಬೇರ್ಪಡಿಸಿ ಪ್ರತಿಭಟಿಸಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಜನಪರ ರೈತ ಹೋರಾಟ ಸಮಿತಿಯು ಕನಿಷ್ಠ ಬೆಂಬಲ ಬೆಲೆಯ ಬೇಡಿಕೆಯಿಟ್ಟು ಪ್ರತಿಭಟನೆಗೆ ಕರೆ ನೀಡಿತ್ತು. ಬ್ರಹ್ಮಾವರ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನಾ ಸಭೆ ನಡೆಸಿದ ರೈತಾಪಿ ವರ್ಗದವರು, ಭತ್ತಕ್ಕೆ ಕನಿಷ್ಠ 2500 ರೂ. ಬೆಂಬಲ ಬೆಲೆ ಆಗ್ರಹಿಸಿ ಬ್ರಹ್ಮಾವರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀ ಯ ಹೆದ್ದಾರಿ 66 ಅನ್ನು ಸ್ವಲ್ಪ ಹೊತ್ತು ಬಂದ್ ಮಾಡಿದ ರೈತರು, ಹೆದ್ದಾರಿಯಲ್ಲೇ ಭತ್ತದ ಫಸಲು ಬಡಿಯುವ ಮಂಚ ಇಟ್ಟು ಪ್ರತಿಭಟನೆ ಆರಂಭಿಸಿದರು. ಹೆದ್ದಾರಿಯಲ್ಲಿಯೇ ಟಾರ್ಪಲ್ ಹಾಸಿ ಭತ್ತದ ಫಸಲಿನ ತೆನೆ ಬೇರ್ಪಡಿಸಿದರು. ಜಿಲ್ಲೆಯ ವಿವಿಧೆಡೆಯ ರೈತರು, ರೈತ ಸಂಘಟನೆಯ ಮುಖಂಡರು ಮತ್ತು ಸದಸ್ಯರು ಭಾಗಿಯಾಗಿದ್ದರು.