DAKSHINA KANNADA
ಸೀಮೆಎಣ್ಣೆಗೆ ಆಗ್ರಹಿಸಿ ಮೀನುಗಾರರ ಪ್ರತಿಭಟನೆ
ಸೀಮೆಎಣ್ಣೆಗೆ ಆಗ್ರಹಿಸಿ ಮೀನುಗಾರರ ಪ್ರತಿಭಟನೆ
ಮಂಗಳೂರು,ಅಕ್ಟೋಬರ್ 3: ಸೀಮೆಎಣ್ಣೆ ವಿತರಿಸುವಂತೆ ಆಗ್ರಹಿಸಿ ದಕ್ಷಿಣಕನ್ನಡ ಜಿಲ್ಲಾ ಗಿಲ್ ನೆಟ್ ಹಾಗೂ ನಾಡದೋಣಿ ಮೀನುಗಾರರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಮಂಗಳೂರಿನ ಮೀನುಗಾರಿಕಾ ಉಪನಿರ್ದೇಶಕರ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಮೀನುಗಾರರು ಸೀಮೆ ಎಣ್ಣೆ ವಿತರಿಸುವಲ್ಲಿ ವಿಫಲರಾದ ಆಹಾರ ಸಚಿವ ಯು.ಟಿ.ಖಾದರ್ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮದ್ಯರಾಜ್ ವಿರುದ್ಧ ಕಿಡಿ ಕಾರಿದರು.ಕಳೆದ ಎಪ್ರಿಲ್ ತಿಂಗಳಿನಿಂದ ಕೇಂದ್ರ ಸರಕಾರವು ಸಹಾಯಧನ ಯುಕ್ತ ಸೀಮೆಎಣ್ಣೆಯನ್ನು ಅಡುಗೆ ಮತ್ತು ಬೆಳಕಿನ ಉಪಯೋಗಕಷ್ಟೇ ಬಳಸಬೇಕು ಹಾಗೂ ಇತರ ಉದ್ಧೇಶಗಳಿಗೆ ಸೀಮೆಎಣ್ಣೆಯನ್ನು ಬಳಸುವಂತಿಲ್ಲ ಎನ್ನುವ ಸ್ಪಷ್ಟ ಆದೇಶ ಹೊರಡಿಸಿದೆ. ಪ್ರಸ್ತುತ ರಾಜ್ಯ ಸರಕಾರವು ಸುಮಾರು 40 ಕೋಟಿ ರೂಪಾಯಿ ಸಹಾಯಧನವನ್ನು ಮೀನುಗಾರಿಕಾ ಇಲಾಖೆಗೆ ನೀಡಿ , ಸಹಾಯಧನ ಯುಕ್ತ ಸೀಮೆಎಣ್ಣೆಯನ್ನು ಮೀನುಗಾರರಿಗೆ ನೀಡಲು ಆದೇಶ ನೀಡಿದೆ. ಆದರೆ ಇದೀಗ ಮೀನುಗಾರಿಕೆಯ ಖುತು ಆರಂಭಗೊಂಡು ತಿಂಗಳು ಕಳೆದರೂ, ಸರಕಾರದ ಸೀಮೆಎಣ್ಣೆ ಮೀನುಗಾರರಿಗೆ ತಲುಪಿಲ್ಲ. ಇದರಿಂದಾಗಿ ಈ ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಬದುಕುತ್ತಿರುವ ಕುಟುಂಬಗಳು ಇದೀಗ ಕಂಗಾಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1300 ಮೀನುಗಾರಿಕಾ ದೋಣಿಗಳು ಪರ್ಮೀಟ್ ಹೊಂದಿದ್ದು, ಸುಮಾರು 25 ಸಾವಿರದಷ್ಟು ಮೀನುಗಾರರು ಇದರಲ್ಲಿ ತೊಡಗಿಕೊಂಡಿದ್ದಾರೆ. ಇಷ್ಟಾದರೂ ಪ್ರತಿವರ್ಷ ಮೀನುಗಾರರು ಸೀಮೆಎಣ್ಣೆಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಗಿಲ್ ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಆಲಿ ಹಸನ್, ಗೌರವಾಧ್ಯಕ್ಷ ಸತೀಶ್ ಕೋಟ್ಯಾನ್, ಪ್ರಾಣೇಶ್, ಸುಭಾಷ್ ಕಾಂಚನ್ ಮೊದಲಾದ ಮೀನುಗಾರ ಮುಖಂಡರು ಭಾಗವಹಿಸಿದ್ದರು.