LATEST NEWS
ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಬಜ್ಪೆ ಪಂಚಾಯತ್ ಕಸ ವಿಲೇವಾರಿಗೆ ಸ್ಥಳೀಯರ ವಿರೋಧ
ಮಂಗಳೂರು ಮೇ 06: ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ಬಜಪೆ ಪಂಚಾಯತ್ ತ್ಯಾಜ್ಯ ವಿಲೇವಾರಿ ಮಾಡಲು ವಾಹನಗಳು ಆಗಮಿಸಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಈ ವೇಳೆ ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಬಜ್ಪೆ ಪಟ್ಟಣ ಪಂಚಾಯಿತ್ ನ ತ್ಯಾಜ್ಯವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ವಿಲೇವಾರಿ ಮಾಡಲು ವಾಹನಗಳು ಇಂದು ಆಗಮಿಸಿತ್ತು. ಆದರೆ, ನಗರದ ಹೊರವಲಯದ ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಸುರಿಯುತ್ತಿರುವುದಕ್ಕೆ ಸ್ಥಳೀಯರು ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದರು. ಪಚ್ಚನಾಡಿ ನಿವಾಸಿಗಳು ತಮ್ಮ ಪ್ರದೇಶದಲ್ಲಿ ನಿರಂತರವಾಗಿ ನಗರದ ತ್ಯಾಜ್ಯವನ್ನು ಸುರಿಯುತ್ತಿದ್ದು ಅದರಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದರೆ. ಇದೀಗ ನಗರದ ಹೊರವಲಯದಿಂದ ಪಚ್ಚನಾಡಿಗೆ ತ್ಯಾಜ್ಯವನ್ನು ತರುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ತ್ಯಾಜ್ಯ ವಿಲೇವಾರಿಗೆ ಅಧಿಕಾರ ನೀಡುವವರು ತಮ್ಮ ಸ್ವಂತ ನಿವಾಸದ ಸಮೀಪವೇ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯರ ವಿರೋಧದ ನಡುವೆಯೂ ತಹಶೀಲ್ದಾರ್ ಬಜ್ಪೆ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ಸುರಿಯಲು ಮುಂದಾದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರು ತಹಶೀಲ್ದಾರ್ ಹಾಗೂ ಬಜ್ಪೆ ಪಂಚಾಯತ್ ಸಿಇಒ ಪರಿಶೀಲನೆ ನಡೆಸಿದರು. ಈ ವೇಳೆ ಬಜ್ಪೆ ಪಂಚಾಯತ್‌ನ ತ್ಯಾಜ್ಯವನ್ನು ಪಚ್ಚನಾಡಿಯನ್ನು ಸುರಿಯಲು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಅನುಮತಿಯಿಲ್ಲದೆ ಇರುವುದು ಪತ್ತೆಯಾಗಿದ್ದು, ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.