Connect with us

    KARNATAKA

    ಮಳೆಗಾಲದಲ್ಲಿ ನಿಮ್ಮ ಆರೋಗ್ಯದ ರಕ್ಷಣೆ ಹೀಗಿರಲಿ…

    ಬದಲಾವಣೆ ಜಗದ ನಿತ್ಯ ನಿಯಮ. ನಮ್ಮ ಸುತ್ತಮುತ್ತಲಿನ ಬದಲಾವಣೆಗಳಿಗೆ ಮತ್ತು ನಮ್ಮ ಶರೀರದೊಳಗೆ ನಡೆಯುವ ಬದಲಾವಣೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಹಾಗೂ ಆ ಬದಲಾವಣೆಗೆ ನಾವು ಹೇಗೆ ನಮ್ಮನ್ನು ಸರಿಯಾದ ಕ್ರಮದಲ್ಲಿ  ತಯಾರು ಮಾಡಿಕೊಳ್ಳುತ್ತೇವೆ ಅನ್ನುವುದು ಬಹು ಮುಖ್ಯ ವಿಷಯ.

    ಶತಮಾನಗಳಷ್ಟು ಹಳೆಯ ಮತ್ತು ನಮ್ಮ ನೆಲದ್ದೇ ಆದ ವೈದ್ಯಕೀಯ ಶಾಸ್ತ್ರವಾದ ಆಯುರ್ವೇದವು ಹಲವಾರು ವರ್ಷಗಳಿಂದ, ನಮ್ಮ ಆರೋಗ್ಯವನ್ನು ಹೇಗೆ ಶಿಸ್ತು ಬದ್ಧವಾಗಿ ಇಟ್ಟುಕೊಳ್ಳಬೇಕು, ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಆಹಾರ, ವಿಹಾರ ಹಾಗು ಜೀವನ ಶೈಲಿಯ ಬಗ್ಗೆ ಜನರಿಗೆ ಹೇಳುತ್ತಲೇ ಬಂದಿದೆ. ಋತುಮಾನದ ಬದಲಾವಣೆಗಳಿಗನುಸಾರವಾಗಿ ನಮ್ಮನ್ನು ಹೇಗೆ ಸಿದ್ಧಪಡಿಸಿ ಕೊಳ್ಳಬೇಕೆಂದು ಸವಿಸ್ತಾರವಾಗಿ ಆಯುರ್ವೇದದ ಪ್ರಮುಖ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

    ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಒಂದು ಪೂರ್ಣ ಸುತ್ತು ಹಾಕಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಈ ಮೂಲಕ ಉಂಟಾಗುವ ಹವಾಮಾನ ಹಾಗು ಪ್ರಕೃತಿಯಲ್ಲಿನ ಅನೇಕ ಬದಲಾವಣೆಗಳಿಗನುಸಾರವಾಗಿ ವಿವಿಧ ’ಋತು’ಗಳಾಗಿ ವಿಂಗಡಿಸಲಾಗಿದೆ. ಈ ಋತುಗಳು ಒಂದು ವರ್ಷದಲ್ಲಿ ನಿರ್ದಿಷ್ಟ ಕಾಲದಲ್ಲಿ ಒಂದರ ನಂತರ ಒಂದರಂತೆ ಬಂದು ಹೋಗುತ್ತವೆ. ಆಯುರ್ವೇದ ಶಾಸ್ತ್ರದಲ್ಲಿ ಆರು ಋತುಗಳನ್ನು ಉಲ್ಲೇಖಿಸಲಾಗಿದೆ. ಈ ಆರು ಋತುಗಳು ಯಾವುವೆಂದರೆ, ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರದ್, ಮತ್ತು ಹೇಮಂತ. ಈ ಆರು ಋತುಗಳನ್ನು ಸೂರ್ಯ ಚಲಿಸುವ ದಿಕ್ಕಿನ ಆಧಾರದ ಮೇಲೆ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಸೂರ್ಯ ಉತ್ತರ ದಿಕ್ಕಿನ ಕಡೆಗೆ ಹೊರಟಾಗ ಬರುವ ಋತುಗಳನ್ನು ಉತ್ತರಾಯಣ ಕಾಲವೆಂದೂ ಮತ್ತು ದಕ್ಷಿಣ ದಿಕ್ಕಿನ ಕಡೆಗೆ ಚಲಿಸುವ ಅವಧಿಯನ್ನು ದಕ್ಷಿಣಾಯನ ಕಾಲವೆಂದು ಕರೆಯಲಾಗಿದೆ. ಉತ್ತರಾಯನ ಕಾಲವು ಶಿಶಿರ, ವಸಂತ, ಗ್ರೀಷ್ಮ ಋತುಗಳನ್ನೂ, ದಕ್ಷಿಣಾಯನವು ವರ್ಷ, ಶರದ್, ಹೇಮಂತ ಋತುಗಳನ್ನೂ ಒಳಗೊಂಡಿದೆ.

    ಆಯುರ್ವೇದ ಶಾಸ್ತ್ರದಲ್ಲಿ ಪ್ರತಿಯೊಂದು ಋತುಗಳಿಗೆ ಅವುಗಳದ್ದೇ ಆದ ವಿಶೇಷವಾದ ಲಕ್ಷಣಗಳು ಮತ್ತು ಆ ಋತುವಿನಲ್ಲಿ ಪಾಲಿಸಬೇಕಾದ ನಿಯಮಾವಳಿಗಳನ್ನು ದಾಖಲು ಮಾಡಲಾಗಿದೆ.  ಈ ನಿಯಮಾವಳಿಗಳನ್ನು ಋತುಚರ್ಯೆ ಎಂದು ಕರೆಯುತ್ತಾರೆ. ಈ ನಿಯಮಗಳನ್ನು ತಪ್ಪದೇ ಪಾಲಿಸಿದ್ದೇ ಆದಲ್ಲಿ  ವರ್ಷ ಪೂರ್ತಿ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎನ್ನುವುದರಲ್ಲಿ  ಎರಡನೇ ಮಾತಿಲ್ಲ.

    ಈ ಋತುಗಳ ಬಗ್ಗೆ ಮಾತಾಡುವಾಗ ಒಂದು ವಿಶೇಷವಾದ ವಿಚಾರವನ್ನು ಪ್ರಸ್ತಾಪ ಮಾಡಬೇಕಾಗುತ್ತದೆ, ಅದು ಯಾವುದೆಂದರೆ ‘ ಋತು ಸಂಧಿ’. ಹಿಂದಿನ ಋತುವಿನ ಕೊನೆಯ ಏಳು ದಿನಗಳು ಮತ್ತು ಮುಂದಿನ ಋತುವಿನ ಏಳು ದಿನಗಳನ್ನು ಋತು ಸಂಧಿ ಎನ್ನುವರು. ಹೀಗೆ ಋತು ಸಂಧಿ ಒಟ್ಟು ಹದಿನಾಲ್ಕು ದಿನಗಳನ್ನು ಒಳಗೊಂಡಿರುತ್ತದೆ. ಈ ಋತು ಸಂಧಿಯ ಸಮಯವು ಆರೋಗ್ಯದ ದೃಷ್ಟಿಯಿಂದ ಸೂಕ್ಷವೆನಿಸಿ ಕೊಳ್ಳುತ್ತದೆ. ಇದಕ್ಕೆ ಕಾರಣ ನಮ್ಮ ದೇಹದ ಮೇಲೆ ಬಾಹ್ಯ ವಾತಾವರಣದಲ್ಲಿನ ಏರುಪೇರುಗಳ ಪ್ರಭಾವ. ಹಾಗಾಗಿ ಈ ಋತು ಸಂಧಿಯ ಸಮಯದಲ್ಲಿ ಆಯುರ್ವೇದಶಾಸ್ತ್ರದಲ್ಲಿ ಹೇಳಿರುವ ನಿಯಮಗಳನ್ನು ತಪ್ಪದೇ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಋತು ಸಂಧಿಯ ಸಮಯದಲ್ಲಿ ನಿಧಾನವಾಗಿ ಹಿಂದಿನ ಋತುವಿನ ಚರ್ಯೆಯನ್ನು ತ್ಯಜಿಸುತ್ತಾ ಮುಂದಿನ ಋತುವಿನ ಚರ್ಯೆಯನ್ನು ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿ ಶಕ್ತಿ, ರೋಗನಿರೋಧಕ ಶಕ್ತಿ, ಮತ್ತು ಮನಸ್ಸು ಹಾಗು ದೇಹವು ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ.

    ಪ್ರಸ್ತುತ ನಾವು ಋತುಸಂಧಿಯ ಅವಧಿಯಲ್ಲಿದ್ದೇವೆ.. ಬೇಸಗೆ ಕಾಲ ಕಳೆದು ಅಂದರೆ ಗ್ರೀಷ್ಮ ಋತು ಮುಗಿದು ವರ್ಷ ಋತುವಿಗೆ ಕಾಲಿಡುತಿದ್ದೇವೆ. ಈ ಸಮಯದಲ್ಲಿ ನಮ್ಮ ಆಹಾರ, ವಿಹಾರ ಹಾಗು ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಜಾರಿಗೆ ತರುವುದು ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಗತ್ಯ.

    ಆಯುರ್ವೇದದ ಪ್ರಕಾರ ಮಳೆಗಾಲದ ವಿಶೇಷತೆಗಳು: 

    ವರ್ಷಾ ಋತು ಅಂದರೆ ಮಳೆಗಾಲವು ದಕ್ಷಿಣಾಯನ ಕಾಲದಲ್ಲಿ ಬರುತ್ತದೆ. ಇದನ್ನು ಆಯುರ್ವೇದದಲ್ಲಿ ವಿಸರ್ಗ ಕಾಲ ಎಂದು ಕರೆಯುತ್ತಾರೆ.  ವರ್ಷಾ ಋತು ವಿಸರ್ಗ ಕಾಲದ ಮೊದಲ ಋತು. ಹಿಂದಿನ ಋತುವಾದ ಗ್ರೀಷ್ಮ ಕಾಲದಲ್ಲಿ ಸೂರ್ಯನ ಪ್ರಖರತೆಯಿಂದ  ದೇಹ ಮತ್ತು ಮನಸ್ಸು ಬಲಹೀನವಾಗಿರುತ್ತವೆ. ವರ್ಷಾ ಋತುವಿನ ನಂತರ ಬರುವ ಶರದ್ ಮತ್ತು ಹೇಮಂತ ಋತುವಿನಲ್ಲಿ ಶರೀರದ ಬಲ ವರ್ಧನೆಯಾಗಿ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ.

    ಮೋಡ ಕವಿದ ವಾತಾವರಣ,ಶೀತಲ ಗಾಳಿ, ಜೋರು ಮಳೆ, ನಿಲ್ಲದ ತುಂತುರು ಮಳೆ ಮನುಷ್ಯನ ಜೀವನ ಮತ್ತು ಆರೋಗ್ಯದಲ್ಲಿ ಏರುಪೇರನ್ನು ತಂದಿಡುತ್ತದೆ. ಆಯುರ್ವೇದದ ಪ್ರಕಾರ ಈ ಋತುವಿನಲ್ಲಿ ವಾತ ದೋಷ ಪ್ರಕುಪಿತ ಗೊಂಡಿರುತ್ತದೆ ಹಾಗು ಪಿತ್ತ ದೋಷವು

    ಸಂಚಯವಾಗಿರುತ್ತದೆ. ಹಾಗಾಗಿಯೇ ವಾತ ಮತ್ತು ಪಿತ್ತ ದೋಷಗಳ ಏರುಪೇರಿನಿಂದ ಉಂಟಾಗುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಷಾ ಋತು ಚರ್ಯೆಯನ್ನು ಅಳವಡಿಸಿಕೊಳ್ಳಬೇಕು.

    ಪಾಲಿಸಬೇಕಾದ ನಿಯಮಗಳು

    • ಜೀರಿಗೆ, ಮೆಣಸು, ಓಮದ ಕಾಳು, ಶುಂಠಿಯಂತಹ ಔಷಧೀಯ ಗುಣಗಳುಳ್ಳ ಮೂಲಿಕೆಗಳೊಂದಿಗೆ ಕುದಿಸಿದ ಬಿಸಿ ನೀರಿನ ಬಳಕೆ.
    • ಹುಳಿ, ಲವಣ ರಸ ಪ್ರಧಾನ ಆಹಾರ ಸೇವನೆ.
    • ಬಾರ್ಲಿ, ಅಕ್ಕಿ, ಗೋಧಿ, ಬೇಳೆ ಮತ್ತು ತರಕಾರಿಗಳಿಂದ ತಯಾರಿಸಿದ ಸೂಪ್ ಸೇವನೆ.
    • ಔಷಧಿ ಗುಣಗಳುಳ್ಳ ಗಿಡಮೂಲಿಕೆಯಿಂದ ತಯಾರದ ಮಾಂಸ ಮತ್ತು ಮಾಂಸ ರಸದ ಸೇವನೆ.
    • ಜೇನು ತುಪ್ಪವನ್ನು ಸೇವಿಸುವುದೇ ಆದಲ್ಲಿ, ಅಲ್ಪ ಪ್ರಮಾಣದಲ್ಲಿ ಸೇವಿಸುವುದು.
    • ಶುಂಠಿ, ಸೌವರ್ಚಲ ಲವಣವನ್ನು ಸೇರಿಸಿದ ಮಜ್ಜಿಗೆಯನ್ನು ಸೇವಿಸುವುದು.
    • ಔಷಧೀಯ ಗುಣಗಳುಳ್ಳ ಗಿಡಮೂಲಿಕೆಯ ಪುಡಿಯನ್ನು ತಯಾರು ಮಾಡಿ, ಸ್ನಾನ ಮಾಡುವಾಗ ದೇಹ ಶುದ್ದಿಗೆ ಬಳಸುವುದು.
    • ಪ್ರತಿ ನಿತ್ಯ ಬಿಸಿ ನೀರಿನಿಂದ ಸ್ನಾನ ಮಾಡುವಾಗ  ಆ ನೀರಿಗೆ ಸುಗಂಧ ಭರಿತ ಮೂಲಿಕೆಗಳನ್ನು ಸೇರಿಸುವುದು.
    • ಮಳೆಯ ಕಾರಣದಿಂದ ವಾತಾವರಣದಲ್ಲಿ ಹೆಚ್ಚು ತೇವಾಂಶವಿರುವುದರಿಂದ, ಕಾಲು್, ಕೈ ಬೆರಳುಗಳ ನಡುವೆ ಫಂಗಸ್ ಬೆಳೆಯುವ ಸಾಧ್ಯತೆ ಇರುತ್ತದೆ ಹಾಗಾಗಿ ಹೊರಗಿನಿಂದ ಬಂದ ಕೂಡಲೇ ಅಥವಾ ಮನೆಯಲ್ಲೇ ಇದ್ದಾಗಲ್ಲೂ ಬೆಚ್ಚಗಿನ ನೀರಿನಿಂದ ಕೈ ಕಾಲು ತೊಳೆದು, ಸರಿಯಾಗಿ ಒರೆಸಿಕೊಳ್ಳಬೇಕು.
    • ಮನೆಯಿಂದ ಹೊರಗೆ ಹೋಗುವಾಗ ಮರೆಯದೆ ಕೊಡೆ, ರೈನ್ ಕೋಟ್ ಅನ್ನು ಒಯ್ಯುವುದು ಮತ್ತು ಕಾಲಿಕೆ ಚಪ್ಪಲಿ ಹಾಕಿಕೊಳ್ಳುವುದನ್ನು ಮರೆಯಬಾರದು.
    • ಮನೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು, ಬಾಣಂತಿಯರು ಇದ್ದಲ್ಲಿ, ಮನೆಯಲ್ಲಿ ಅವರು ನಡೆದಾಡುವಾಗ ಎಚ್ಚರ ವಹಿಸಬೇಕು. ಮಳೆಯ ನೀರು ಬೀಳುವ ಜಾಗದಲ್ಲಿ  ಫ್ಲೋರ್ ಮ್ಯಾಟ್ ನ್ನು ತಪ್ಪದೇ ಹಾಕಬೇಕು.
    •  ಸೊಳ್ಳೆಯ ನಿಯಂತ್ರಣಕ್ಕಾಗಿ ಮನೆಯ ಒಳಗೆ ಹಾಗು ಅಂಗಳದಲ್ಲಿ ನೀರು ನಿಲ್ಲದ ಹಾಗೆ ಎಚ್ಚರವಹಿಸಬೇಕು.
    • ಆರೋಗ್ಯದಲ್ಲಿ ಏರುಪೇರು ಆದಾಗ ತಕ್ಷಣವೇ ವೈದ್ಯರನ್ನು ಕಾಣಬೇಕು.

    ತ್ಯಜಿಸಬೇಕಾದ ವಿಷಯಗಳು

    • ಶೀತಲ ಗಾಳಿಗೆ ಮೈಯನ್ನು ಒಡ್ಡುವುದು.
    • ಹೀಗೆ ಮಾಡುವುದರಿಂದ ಶರೀರದ ಶೈತ್ಯತೆಯು ಹೆಚ್ಚಾಗಿ ವಾತ ದೋಷ ವೃದ್ಧಿಯಾಗುತ್ತದೆ. ಇದರಿಂದ ಮೈಕೈ ನೋವು, ಚರ್ಮದ ಶುಷ್ಕತೆ ಹೆಚ್ಚಾಗುವ ಸಂಭವವಿದೆ.
    • ಬೆಳಗ್ಗಿನ ಹಾಗು ಮಧ್ಯಾಹ್ನದ ವೇಳೆಯಲ್ಲಿ ನಿದ್ರಿಸುವುದು.
    • ಇದರಿಂದ ಅಜೀರ್ಣ, ಆಲಸ್ಯ, ಮಂದತೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
    • ಅತಿಯಾಗಿ ವ್ಯಾಯಾಮ ಮಾಡುವುದು.
    • ಅತಿಯಾದ ವ್ಯಾಯಾಮದಿಂದ ವಾತವೃದ್ಧಿಯಾಗಿ ವಾತ ಸಂಬಂಧಿತ ಸಮಸ್ಯೆಗಳುಂಟಾಗಬಹುದು.
    • ಚಪ್ಪಲಿ ಮತ್ತು ಕೊಡೆಯಿಲ್ಲದೆ ಹೊರಗೆ ಹೋಗುವುದು.
    • ಮಳೆಯಲ್ಲಿ ಬರಿಗಾಲಿನಲ್ಲಿ ನಡೆಯುವುದರಿಂದ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಅಥವಾ ಕಲುಷಿತ ನೀರಿನಲ್ಲಿ ಇರುವ ಪರಾವಲಂಬಿ ಜೀವಿಗಳಿಂದ ಕಾಲು ಅಥವಾ ಉಗುರಿನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅದೇರೀತಿ ಮಳೆಯಲ್ಲಿ ನೆನೆಯುವುದರಿಂದ ಶೀತ, ಕೆಮ್ಮು, ಜ್ವರ ಇತ್ಯಾದಿ ಸಮಸ್ಯೆಗಳುಂಟಾಗಬಹುದು.
    • ತಣ್ಣಗಿನ ಆಹಾರ ಸೇವನೆ.
    • ತಣ್ಣಗಿನ ಆಹಾರ ಸೇವನೆಯಿಂದ ಜೀರ್ಣಶಕ್ತಿ ಕಡಿಮೆಯಾಗಿ, ಶರೀರದಲ್ಲಿ ’ಆಮ’ ಎಂಬ ವಿಷಕಾರಿ ಅಂಶವುಂಟಾಗಿ ಇತರ ರೋಗಗಳಿಗೆ ಕಾರಣವಾಗಬಹುದು.
    • ಹೀಗೆ ಆಯುರ್ವೇದದಲ್ಲಿ ಹೇಳಿರುವ  ಋತುವಿಗೆ ಸಂಬಂಧ ಪಟ್ಟ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಉತ್ತಮ ಆರೋಗ್ಯವು ನಮ್ಮ ಪಾಲಾಗುತ್ತದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *