LATEST NEWS
ಫೆಬ್ರವರಿ 5 ರಂದು ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಗೇಟ್ ನಲ್ಲಿ ಖಾಸಗಿ ಬಸ್ ಮಾಲಕರ ಪ್ರತಿಭಟನೆ
ಉಡುಪಿ ಫೆಬ್ರವರಿ 04: ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಕಾನೂನು ಬಾಹಿರವಾಗಿ ಖಾಸಗಿ ಬಸ್ ಗಳಿಂದ ಹೆಚ್ಚುವರಿ ಹಣ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿ ಬಸ್ ಮಾಲಕರು ಇದೇ ಫೆಬ್ರವರಿ 5ರಂದು ಎರಡೂ ಟೋಲ್ ಎದುರು ಧರಣಿ ನಡೆಸಲಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಕೆನರಾ ಬಸ್ ಮಾಲಕರ ಸಂಘ, ಕರಾವಳಿ ಬಸ್ ಮಾಲಕರ ಸಂಘ ಸೇರಿದಂತೆ ವಿವಿಧ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಈ ಧರಣಿ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ನಿರ್ದೇಶನದಂತೆ ಫಾಸ್ಟ್‌ಟ್ಯಾಗ್ ಕ್ಲಾಸಿಫಿಕೇಷನ್ ಪ್ರಕಾರ 7500ರಿಂದ 12000 ಕೆ.ಜಿ.ವಾಹನಗಳ ಟ್ಯಾಗ್(5)ರಡಿ ವಿಧಿಸುವ ಟೋಲ್ ಹಣ ನಮ್ಮ ಬಸ್‌ಗಳು ಟೋಲ್ ಪ್ಲಾಜಾ ದಾಟುವಾಗ ಕಡಿತಗೊಳ್ಳುತ್ತದೆ. ಆದರೆ ಟೋಲ್ ಪ್ಲಾಜಾದವರು ಆ ಬಳಿಕ ಕಾನೂನು ಬಾಹಿರವಾಗಿ ನಮ್ಮ ಟೋಲ್ ವಾಲೆಟ್‌ನಲ್ಲಿರುವ ಹಣವನ್ನು ಹೆಚ್ಚುವರಿ ಯಾಗಿ ಕಡಿತಗೊಳಿಸುತಿದ್ದಾರೆ ಎಂದು ಕರಾವಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಆರೋಪಿಸಿದರು. ಈ ಮೂಲಕ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗಳಲ್ಲಿ ಪ್ರತಿದಿನ ಸುಮಾರು 8ರಿಂದ 10 ಲಕ್ಷ ರೂ.ಗಳನ್ನು ಬಸ್ ಮಾಲಕರಿಂದ ಟೋಲ್‌ನವರು ಲೂಟಿ ಮಾಡುತಿದ್ದಾರೆ ಎಂದು ಸದಾನಂದ ಛಾತ್ರ ದೂರಿದರು. ಈ ಬಗ್ಗೆ ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಎಸ್ಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಎಲ್ಲರಿಗೂ ಮನವಿ ಅರ್ಪಿಸಿ ಸರಿಪಡಿಸಿವಂತೆ ತಿಳಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಫೆ.5ರಂದು ಮಾಲಕರು ಟೋಲ್‌ಗಳ ಎದುರು ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದರು.