ಶಿವಮೊಗ್ಗ: ಗಲಭೆ ಪೀಡಿತ ಪ್ರದೇಶವಾದ ಜಿಲ್ಲೆಯ ರಾಗಿಗುಡ್ಡಕ್ಕೆ ಭೇಟಿ ನೀಡಬೇಕಿದ್ದ ಶ್ರೀರಾಮ‌ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಒಂದು ತಿಂಗಳ ಕಾಲ ಶಿವಮೊಗ್ಗ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.


ಪೊಲೀಸ್ ಇಲಾಖೆಯ ಕೋರಿಕೆ ಮೇರೆಗೆ ಅಕ್ಟೋಬರ್ 17 ರಿಂದ 30 ದಿನಗಳ ಜಿಲ್ಲೆಗೆ ಭೇಟಿ ನೀಡದಂತೆ ಮುತಾಲಿಕ್ ಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಆದೇಶಿಸಿದ್ದಾರೆ.

ಅ.1 ರಂದು ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಹಾನಿಯಾದ ಮನೆಗಳಿಗೆ ಇಂದು ಮುತಾಲಿಕ್ ಭೇಟಿ‌ ಮಾಡಿ ಸಾಂತ್ವನ ಹೇಳುವವರಿದ್ದರು.

ಆದರೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬಸ್ ನಲ್ಲಿ ಬರುತ್ತಿದ್ದ ವೇಳೆ ತಡರಾತ್ರಿ 2 ಗಂಟೆಗೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ತಡೆದ ಪೊಲೀಸರು, ಮುತಾಲಿಕ್ ಅವರನ್ನು ವಶಕ್ಕೆ ಪಡೆದು, ನಿರ್ಬಂಧದ ಆದೇಶ ಪ್ರತಿ ನೀಡಿದರು.

ಆ ಬಳಿಕ ಪೊಲೀಸ್ ಬೆಂಗಾವಲು ವಾಹನದೊಂದಿಗೆ ಪ್ರತ್ಯೇಕ ಕಾರಿನಲ್ಲಿ ದಾವಣಗೆರೆಗೆ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ಕಳುಹಿಸಿ ಕೊಟ್ಟರು.

Share Information