LATEST NEWS
ಪ್ರಧಾನಿ ಮೋದಿ ಪ್ರತಿನಿಧಿಸುವ ಕ್ಷೇತ್ರದ ವಿದ್ಯಾರ್ಥಿಗಳಿಂದ ಕೃಷ್ಣ ನಗರಿಯಲ್ಲಿ ಯಕ್ಷಾಭ್ಯಾಸ
ಉಡುಪಿ, ಜೂನ್ 21: ಭಾಷೆಯ ಗಡಿಗಳನ್ನು ದಾಟಿ ಯಕ್ಷಗಾನ ಬೆಳೆಯುತ್ತಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು, ಕೃಷ್ಣ ನಗರಿ ಉಡುಪಿಗೆ ಯಕ್ಷಗಾನ ಕಲಿಯಲು ಬಂದಿದ್ದಾರೆ. ಗುರು ಬನ್ನಂಜೆ ಸಂಜೀವ ಸುವರ್ಣರ ಮಾರ್ಗದರ್ಶನದಲ್ಲಿ ಹಿಂದಿ ಯಕ್ಷಗಾನದ ಶಿಬಿರ ಏರ್ಪಟ್ಟಿದೆ.
ಕನ್ನಡದ ಕಲೆ ಯಕ್ಷಗಾನಕ್ಕೆ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳೇ ಮನಸೋತಿದ್ದಾರೆ. ಭವಿಷ್ಯದ ಚಲನಚಿತ್ರರಂಗ ಮತ್ತು ಟಿವಿ ಪರದೆಯನ್ನು ಅಲಂಕರಿಸದಿರುವ ಯುವ ಕಲಾವಿದರು 20 ದಿನಗಳಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ. ಗುರುಬನಂಜೆ ಸಂಜೀವ ಸುವರ್ಣ ಅವರು, ಸಾಂಪ್ರದಾಯಿಕ ಹೆಜ್ಜೆಗಾರಿಕೆಯನ್ನು ಕಲಿಸುವುದರ ಜೊತೆಗೆ ಯಕ್ಷಗಾನ ಪ್ರದರ್ಶನಕ್ಕೆ ಈ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
ಪ್ರತಿದಿನ ಹನ್ನೆರಡು ಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳು ಬೆವರಿಳಿಸಿ ಯಕ್ಷಗಾನದ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನವನ್ನು ನೀಡಲಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ಕಲಿಕೆಯ ಭಾಗವಾಗಿ ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನವನ್ನು ಒಂದು ಪಠ್ಯವಾಗಿ ಕಲಿಸಲಾಗುತ್ತದೆ.
ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದ್ದು, ದೇಶದ ನಾನಾ ಭಾಗಗಳ ಕಲಾವಿದರು ಅಪರೂಪದ ಕರಾವಳಿಯ ಕಲೆಯನ್ನು ಅಭ್ಯಸಿಸುವಂತಾಗಿದೆ. ಅದಮಾರು ಮಠದ ಆಶ್ರಯದಲ್ಲಿ ಈ ಶಿಬಿರ ಏರ್ಪಟ್ಟಿದ್ದು, ಗಾನನಾಟ್ಯ ಸಂಭಾಷಣೆಯ ಅಪರೂಪದ ಕಲೆ ದೇಶದ ಮೂಲೆ ಮೂಲೆಗಳಿಂದ ಕಲಾವಿದರನ್ನು ಆಕರ್ಷಿಸುತ್ತಿದೆ.