KARNATAKA
ಸ್ಪರ್ಧೆಗಾಗಿ ತಾಯಿಯ ಚಿನ್ನ ಅಡವಿಟ್ಟ ಪವರ್‌ಲಿಫ್ಟರ್
ಸ್ಪರ್ಧೆಗಾಗಿ ತಾಯಿಯ ಚಿನ್ನ ಅಡವಿಟ್ಟ ಪವರ್‌ಲಿಫ್ಟರ್
ಮಂಗಳೂರು ಸೆಪ್ಟೆಂಬರ್ 15: ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿ 2 ಚಿನ್ನ3 ಬೆಳ್ಳಿ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದ ಕ್ರೀಡಾಪಟು ಮಂಗಳೂರಿನ ಪ್ರದೀಪ್ ಆಚಾರ್ಯ ಅವರಿಗೆ ಈ ಬಾರಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಆರ್ಥಿಕ ಮುಗ್ಗಟ್ಟು ಅಡ್ಡಿಯಾಗಿದೆ.
ಸರ್ಕಾರದಿಂದ ಕಿಂಚಿತ್ತೂ ಪ್ರೋತ್ಸಾಹ ಸಿಗದೆ ತಾಯಿಯ ಚಿನ್ನವನ್ನೇ ಅಡವಿಟ್ಟು ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ ಪ್ರದೀಪ್. ಸೆಪ್ಟೆಂಬರ್ 18ರಂದು ದುಬೈನಲ್ಲಿ ಸ್ಪರ್ಧಾಕೂಟ ನಡೆಯಲಿದ್ದು, ಸೆಪ್ಟೆಂಬರ್ 15 ಭಾಗವಹಿಸಲು ಬೇಕಾದ ಮೊತ್ತ ಕಟ್ಟಲು ಕೊನೇ ದಿನಾಂಕವಾಗಿದೆ. ಈ ಹಿನ್ನಲೆಯಲ್ಲಿ ಕೂಟದಲ್ಲಿ ಭಾಗವಹಿಸುವ ಉದ್ದೇಶದಿಂದ ತಾಯಿಯ ಚಿನ್ನ ಅಡವಿಟ್ಟು, ಬಂಧು-ಮಿತ್ರರ ಸಹಕಾರದಿಂದ 49 ಸಾವಿರ ರೂ. ಮೊತ್ತ ಪಾವತಿಸಿದ್ದು, ಇನ್ನೂ 80 ಸಾವಿರ ರೂಪಾಯಿ ಹಣದ ಅಗತ್ಯವಿದ್ದು ಯಾರಾದರೂ ಪ್ರಾಯೋಜಕರು ಸಿಗಬಹುದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರದೀಪ್.
2013 ರಿಂದಲೇ ನಿರಂತರವಾಗಿ ಪದಕಗಳ ಬೇಟೆಯಾಡುತ್ತಿರುವ ಪ್ರದೀಪ್ ಕಾಮನ್ ವೆಲ್ತ್ ಕ್ರೀಡಾಕೂಟದ ಬಳಿಕ ಸರ್ಕಾರ ದಿಂದ ಹೊಸ ನಿರೀಕ್ಷೆ ಇಟ್ಟುಕೊಂಡಿದ್ದರು.ಆದ್ರೆ ನಿಯಮದ ಪ್ರಕಾರ ಚಿನ್ನ ಗೆದ್ದ ಸ್ಪರ್ಧಿಗೆ ಸರ್ಕಾರ ನೀಡಬೇಕಾದ ಪ್ರೋತ್ಸಾಹ ಧನ ಇನ್ನೂ ಕೈ ಸೇರಿಲ್ಲ..ರಾಜ್ಯ ಸರ್ಕಾರದ ಮರತೇ ಹೋಗಿದೆ.ಪರ್ಸನಲ್ ಲೋನ್ ಮಾಡಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದು,ಅದರ ಸಾಲವೇ ಇನ್ನೂ ತೀರಿಲ್ಲ..ಈ ನಡುವೆ ದೇಶಕ್ಕಾಗಿ ಆಡಬೇಕೆಂಬ ಛಲ ಇರೋದ್ರಿಂದ ಈಗ ಮತ್ತೊಮ್ಮೆ ಸಾಲ ಮಾಡಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರದೀಪ್ ಕುಮಾರ್ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಬಾಲಾಂಜನೇಯ ಜಿಮ್ ನಲ್ಲಿ ತರಬೇತಿ ಪಡೆಯುತ್ತಿದ್ದು, ಸ್ನೇಹಿತರು ಸಹಾಯ ಮಾಡುತ್ತಿದ್ದಾರೆ. ಪ್ರದೀಪ್ ಕುಮಾರ್ ಸ್ವಂತ ಜಿಮ್ ಸೆಂಟರ್ ಹೊಂದಿದ್ದು ಬೆಳಗ್ಗೆ 6 ಗಂಟೆಯಿಂದ ಹತ್ತು ಗಂಟೆಯವರೆಗೆ ಬಾಲಾಂಜನೇಯ ಜಿಮ್ ಸೆಂಟರ್ ನಲ್ಲೇ ತರಬೇತಿ ಪಡೆಯುತ್ತಿದ್ದಾರೆ.ಸರ್ಕಾರ ಪ್ರೋತ್ಸಾಹ ನೀಡಿದ್ರೆ ಮತ್ತಷ್ಟು ಸಾಧಿಸುವ ತಾಕತ್ತು ಪ್ರದೀಪ್ ನಲ್ಲಿದೆ ಅಂತಾರೆ ಜಿಮ್ ನ ಹಿರಿಯರು.
ಒಟ್ಟಿನಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರವನ್ನು ಸರ್ಕಾರ ಕಡೆಗಣಿಸಿರೋದ್ರಿಂದ ಪ್ರತಿಭೆಗಳು ಮರೆಯಾಗುತ್ತಿದೆ. ಒಂದೆಡೆ ಸರ್ಕಾರ ಬೇಕಾಬಿಟ್ಟಿ ಯಾಗಿ ಖರ್ಚು ಮಾಡುತ್ತಿದ್ರೆ,ಇನ್ನೊಂದೆಡೆ ಕ್ರೀಡಾಪಟುಗಳು ತಾಯಿಯ ಚಿನ್ನ ಅಡವಿಟ್ಟು ದೇಶವನ್ನು ಪ್ರತಿನಿಧಿಸಲು ಅಣಿಯಾಗುವ ಸ್ಥಿತಿ ಬಂದಿರೋದು ದುರಂತವೇ ಸರಿ.