KARNATAKA
ಪವರ್ ಟಿವಿ ಸ್ಥಗಿತ ಮುಂದುವರಿಕೆ – ಪರವಾನಗಿ ನವೀಕರಣದ ಬಗ್ಗೆ ತೀರ್ಮಾನಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು ಜುಲೈ 03: ಲೈಸೆನ್ಸ್ ರಿನಿವಲ್ ಮಾಡದೇ ಚಾನೆಲ್ ಪ್ರಸಾರ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಪ್ರಸಾರ ಸ್ಥಗಿತಕ್ಕೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಮತ್ತೆ ಮುಂದುವರೆಸಿ ಹೈಕೋರ್ಟ್ ಆದೇಶ ನೀಡಿದೆ.
ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ, ‘ಮೆಸರ್ಸ್ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ’ ನಿರ್ದೇಶಕ ಬೆಂಗಳೂರಿನ ದಬ್ಬೇಗಟ್ಟ ಮಧು ಲಕ್ಷ್ಮಣ, ‘ಮೆಸರ್ಸ್ ಮಿಟ್ಕಾನ್ ಇನ್ಫ್ರಾಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ’ ನಿರ್ದೇಶಕ ಮುಂಬೈನ ಶ್ರೀಕಾಂತ್ ಮಿಥೇಶ್ ಬಾಂಗ್ಡಿಯಾ ಮತ್ತು ‘ಪವರ್ ಸ್ಮಾರ್ಟ್ ಮೀಡಿಯಾ‘ದ ಬೆಂಗಳೂರಿನ ಹೆಚ್ಚುವರಿ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಅಲಿಯಾಸ್ ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಮೇಲ್ಮನವಿ ಮೇಲಿನ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
ಪವರ್ ಟಿವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಪವರ್ ಟಿವಿ ಪರ ವಕೀಲರು ವಾದ ಮಂಡಿಸಿ, ಕೇಂದ್ರ ಸರಕಾರ ಶೋಕಾಸ್ ನೋಟಿಸ್ ನೀಡಿತ್ತು. ಅದಕ್ಕೆ ಪವರ್ ಟಿವಿ ಉತ್ತರವನ್ನೂ ನೀಡಿದೆ. ಅದರೆ ಇದರ ಬಗ್ಗೆ ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ವಾದ ಆಲಿಸಿದ ಹೈಕೋರ್ಟ್, ಶೋಕಾಸ್ ನೋಟಿಸ್ ಜೊತೆಗೆ ಪರವಾನಗಿ ನವೀಕರಣದ ಬಗ್ಗೆ ತೀರ್ಮಾನಿಸಲು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಈಗಾಗಲೇ ಶೋಕಾಸ್ ನೋಟಿಸ್ ಗೆ ಉತ್ತರಿಸಿರುವ ಪವರ್ ಟಿವಿಯ ಉತ್ತರ ಪರಿಗಣಿಸಿ ಪರವಾನಗಿ ನವೀಕರಿಸಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರಕಾರ 6 ವಾರಗಳಲ್ಲಿ ತೀರ್ಮಾನಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲಿಯವರೆಗೆ ಪವರ್ ಟಿವಿ ಪ್ರಸಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಮುಂದುವರೆಸಿದೆ.