MANGALORE
ಬಾರ್ ಮುಚ್ಚಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ “ಪೋಸ್ಟ್ ಕಾರ್ಡ್ ಚಳವಳಿ”
ಬಾರ್ ಮುಚ್ಚಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ “ಪೋಸ್ಟ್ ಕಾರ್ಡ್ ಚಳವಳಿ”
ಮಂಗಳೂರು,ಡಿಸೆಂಬರ್ 16: ಮಂಗಳೂರು ನಗರದ ಕುಂಟಿಕಾನ ಪರಿಸರದಲ್ಲಿ ಸೈಂಟ್ ಆ್ಯನ್ಸ್ ಶಾಲೆಯ ಹತ್ತಿರ 100 ಮೀಟರ್ ವ್ಯಾಪ್ತಿಯೊಳಗೆ ಹೊಸದಾಗಿ ಬಾರ್ & ರೆಸ್ಟೋರೆಂಟ್ ಆರಂಭಗೊಂಡಿದೆ.
ಈ ಹೈ ಆನ್ 66 ಬಾರ್ & ರೆಸ್ಟೋರೆಂಟ್ ನಲ್ಲಿ ಕೇವಲ ರೆಸ್ಟೋರೆಂಟ್ ಗೆ ಮಾತ್ರ ಅನುಮತಿ ನೀಡಿ, ಬಾರ್ ಅನ್ನು ಮುಚ್ಚಿಸುವಂತೆ ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗೆ ಪೋಸ್ಟ್ ಕಾರ್ಡ್ ಚಳವಳಿಯನ್ನು ಆರಂಭಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಸೆಕ್ಷನ್ 6, 2003 ರ ಕಾಯಿದೆಯಂತೆ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ 100ಮೀಟರ್ ಅಂತರದಲ್ಲಿ ಯಾವುದೇ ತಂಬಾಕು ಉತ್ಪಾದನೆ ಅಥವಾ ಅಮಲು ಪದಾರ್ಥಗಳ ಜಾಹೀರಾತು, ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ.
ಆದರೂ ಕೂಡ ಕೇವಲ 80 ಮೀಟರ್ ನ ಅಂತರದಲ್ಲಿ ಬಾರ್ ಗೆ ಅನುಮತಿ ನೀಡಲಾಗಿದೆ.
ಕುಂಟಿಕಾನದಲ್ಲಿ ಬಾರ್ & ರೆಸ್ಟೋರೆಂಟ್, ಶಾಲೆಯಿಂದ ಕೇವಲ 80 ಮೀಟರ್ ದೂರದಲ್ಲಿದ್ದು, ಕಾನೂನು ಬಾಹಿರವಾಗಿದೆ ಎಂದು ದೂರಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಡಿಸೆಂಬರ್ 7 ರಂದು ಪ್ರತಿಭಟನೆ ನಡೆಸಿದ್ದರು.
ಆದರೂ ಪ್ರತಿಭಟನೆಯನ್ನು ಲೆಕ್ಕಿಸದೆ ಮಂಗಳೂರು ಜನಪ್ರತಿನಿಧಿ ಎನಿಸಿಕೊಂಡ ನಗರ ಮೇಯರ್ ಉದ್ಘಾಟನೆಗೊಳಿಸಿದ್ದರು.
ಇದು ಆರಂಭಗೊಳ್ಳುವುದಕ್ಕಿಂತ ಮುಂಚೆ ಅಬಕಾರಿ ಆಯುಕ್ತರು ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಶಾಲಾಡಳಿತ ಸಮಿತಿಯು ಮನವಿ ಸಲ್ಲಿಸಿತ್ತದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಒಟ್ಟಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆಯ ಅಧ್ಯಕ್ಷರಿಗೆ “ಪೋಸ್ಟ್ ಕಾರ್ಡ್ ಚಳವಳಿ’’ ಆರಂಭಿಸಿದ್ದಾರೆ.
ಈ ಶಾಲಾ ಪರಿಸರದಲ್ಲಿ ರೆಸ್ಟೋರೆಂಟಿಗೆ ಮಾತ್ರ ಅನುಮತಿ ನೀಡಿ, ಬಾರನ್ನು ಮುಚ್ಚಲು ಕ್ರಮ ಜರುಗಿಸಿ ಎಂದು ವಿದ್ಯಾರ್ಥಿಗಳು ಪೋಸ್ಟ್ ಕಾರ್ಡ್ ಮುಖಾತರ ಚಳವಳಿ ಅರಂಭಿಸಿದ್ದಾರೆ.