Connect with us

LATEST NEWS

ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು

ಮುಂಬೈ: ‘ಪೋಶೆ’ ಕಾರು ಅಪಘಾತ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಸಿಲುಕಿರುವ ಬಾಲಕನಿಗೆ ನೀಡಿದ್ದ ಜಾಮೀನನ್ನು ಇಲ್ಲಿನ ಬಾಲಾಪರಾಧ ನ್ಯಾಯ ಮಂಡಳಿ (ಜೆಜೆಬಿ) ಬುಧವಾರ ರದ್ದುಗೊಳಿಸಿದೆ. ಅಲ್ಲದೆ, ಈ ಬಾಲಕನನ್ನು ಜೂನ್ 5 ರವರೆಗೆ ಬಾಲ ವೀಕ್ಷಣಾ ಮಂದಿರಕ್ಕೆ ಕಳುಹಿಸಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ವಿಶಾಲ್‌ ಅಗರ್‌ವಾಲ್‌ ಅವರ ಪುತ್ರ, 17ರ ಹರೆಯದ ಬಾಲಕ ಪಾನಮತ್ತನಾಗಿ ‘ಪೋಶೆ’ ಕಾರು ಚಾಲನೆ ಮಾಡಿ, ಪುಣೆಯ ಕಲ್ಯಾಣಿ ನಗರದಲ್ಲಿ ಭಾನುವಾರ ನಸುಕಿನಲ್ಲಿ ಬೈಕಿಗೆ ಡಿಕ್ಕಿ ಹೊಡೆದಿದ್ದ. ಬೈಕಿನಲ್ಲಿದ್ದ ಮಧ್ಯಪ್ರದೇಶ ಮೂಲದ ಇಬ್ಬರು ಟೆಕಿಗಳು ಸಾವನ್ನಪ್ಪಿದ್ದರು. ಘಟನೆ ನಡೆದ ಒಂದೇ ತಾಸಿನಲ್ಲಿ ಜೆಜೆಪಿಯು ಈ ಬಾಲಕನಿಗೆ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡಿತ್ತು.

‘ಕಾನೂನು ಸಂಘರ್ಷ ಎದುರಿಸುತ್ತಿರುವ ಈ ಬಾಲಕನು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ, ರಸ್ತೆ ಸಂಚಾರ ನಿಯಮಗಳನ್ನು ಅರಿಯಬೇಕು ಮತ್ತು ರಸ್ತೆ ಸುರಕ್ಷತೆ ಹಾಗೂ ಅದರ ಪರಿಹಾರೋಪಾಯಗಳು ಕುರಿತು 15 ದಿನದಲ್ಲಿ 300 ಪದಗಳ ಪ್ರಬಂಧ ಸಲ್ಲಿಸಬೇಕು’ ಎಂದು ಆದೇಶಿಸಿತ್ತು.

ಜೆಜೆಬಿಯ ಈ ಆದೇಶಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಮಹಾರಾಷ್ಟ್ರದ ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಜೆಜೆಬಿ ಆದೇಶಕ್ಕೆ ತೀವ್ರ ಆಘಾತ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದರು. ಜಾಮೀನು ಆದೇಶ ಮರುಪರಿಶೀಲಿಸಲು ಪುಣೆ ಪೊಲೀಸರು ಅರ್ಜಿ ಸಲ್ಲಿಸಿದ ನಂತರ ಜೆಜೆಬಿಯು ಬಾಲಕನಿಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿತ್ತು.

ಇದಕ್ಕೂ ಮೊದಲು ಜೆಜೆಬಿ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ, ಘೋರ ಅಪರಾಧ ಎಸಗಿರುವ 17ರ ಹರೆಯದ ಬಾಲಕನನ್ನು ವಯಸ್ಕರಂತೆ ಪರಿಗಣಿಸಿ ವಿಚಾರಣೆ ನಡೆಸಲು ಅನುಮತಿಸುವಂತೆ ಪೊಲೀಸರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಜೆಜೆಬಿ ಮುಂದೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಪೊಲೀಸರಿಗೆ ಸೂಚಿಸಿತ್ತು.

ಕಾನೂನು ಸಂಘರ್ಷಕ್ಕೆ ಸಿಲುಕಿರುವ ಬಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಬಾಲಕನ ತಂದೆ 24ರವರೆಗೆ ಕಸ್ಟಡಿಗೆ:

ಚಾಲನಾ ಪರವಾನಗಿ ಇಲ್ಲದ ಬಾಲಕನಿಗೆ ಕಾರು ಚಲಾಯಿಸಲು ಅನುಮತಿಸಿದ ಕಾರಣಕ್ಕೆ ಬಂಧಿಸಲಾಗಿರುವ ಬಾಲಕನ ತಂದೆ, ರಿಯಲ್‌ ಎಸ್ಟೇಟ್‌ ಉದ್ಯಮಿ ವಿಶಾಲ್‌ ಅಗರ್ವಾಲ್‌ ಮತ್ತು ಬಾಲಕನಿಗೆ ಮದ್ಯ ಪೂರೈಸಿರುವುದಕ್ಕೆ ಬಂಧಿಸಲ್ಪಟ್ಟಿರುವ ಬ್ಲ್ಯಾಕ್‌ ಕ್ಲಬ್‌ ಪಬ್‌ನ ಇಬ್ಬರು ಉದ್ಯೋಗಿಗಳಾದ ನಿತೇಶ್ ಶೇವಾನಿ ಮತ್ತು ಜಯೇಶ್ ಗಾಂವ್ಕರ್ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಪಿ. ಪೊಂಕ್ಶೆ ಅವರ ಮುಂದೆ ಬುಧವಾರ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಈ ಮೂವರನ್ನು ಮೇ 24ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದರು.

ಬಾಲಕನಿಗೆ ಮದ್ಯ ಪೂರೈಸಿರುವ ಕಾರಣಕ್ಕೆ ಮಂಗಳವಾರ ಬಂಧಿಸಲಾಗಿದ್ದ ಹೋಟೆಲ್‌ವೊಂದರ ಮಾಲೀಕ ಮತ್ತು ಮ್ಯಾನೇಜರ್‌ ಹಾಗೂ ಬ್ಲ್ಯಾಕ್‌ ಕ್ಲಬ್‌ ಪಬ್‌ನ ಮ್ಯಾನೇಜರ್‌ ಸೇರಿ ಮೂವರು ಆರೋಪಿಗಳನ್ನೂ ಇದೇ 24ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ಮಂಗಳವಾರ ಕೋರ್ಟ್‌ ಆದೇಶಿಸಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *