LATEST NEWS
ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಓನ್…!!
ನವದೆಹಲಿ ಎಪ್ರಿಲ್ 19: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನಕ್ಕೇರಿದೆ. ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ದತ್ತಾಂಶ ಈ ಮಾಹಿತಿ ನೀಡಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಚೀನಾದ ಜನಸಂಖ್ಯೆ 142.57 ಕೋಟಿ ಇದ್ದರೆ, ಭಾರತದ ಜನಸಂಖ್ಯೆ 142.86 ಕೋಟಿ ದಾಟಿದೆ.
1950ರಲ್ಲಿ ವಿಶ್ವಸಂಸ್ಥೆಯು ಜಗತ್ತಿನ ಜನಸಂಖ್ಯೆಯ ದತ್ತಾಂಶಗಳನ್ನು ಸಂಗ್ರಹಿಸಲು ಆರಂಭಿಸಿದ ಬಳಿಕ, ಅತ್ಯಂತ ಜನಸಂಖ್ಯೆಯುಳ್ಳ ದೇಶಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಪ್ರಥಮ ಸ್ಥಾನ ಪಡೆದಿದೆ. 1960ರ ನಂತರ ಮೊದಲ ಸಲ ಚೀನಾದ ಜನಸಂಖ್ಯೆಯು ಕಳೆದ ವರ್ಷ ಕುಸಿತ ಕಂಡಿತ್ತು. ಒಂದೇ ಮಗು ನೀತಿಯಿಂದಾಗಿ ಚೀನಾದ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಒಂದೆರಡು ದಶಕಗಳಲ್ಲಿನ ಜನನ ನಿಯಂತ್ರಣವು ಈಗ ಅದಕ್ಕೆ ಮಾನವ ಸಂಪನ್ಮೂಲದ ಕೊರತೆ ಉಂಟಾಗಲು ಕಾರಣವಾಗಿದೆ. ಕೆಲವು ಪ್ರದೇಶಗಳು ಈಗಾಗಲೇ ಜನನ ಪ್ರಮಾಣ ಹೆಚ್ಚಿಸಲು ಯೋಜನೆಗಳನ್ನು ಪ್ರಕಟಿಸಿವೆ. ಆದರೆ ಜನಸಂಖ್ಯಾ ಕುಸಿತದ ಸನ್ನಿವೇಶವನ್ನು ತಡೆಯುವುದು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಭಾರತವು 2011ರ ಬಳಿಕ ಮತ್ತೆ ಜನಗಣತಿ ನಡೆಸಿಲ್ಲ. ಹೀಗಾಗಿ ಭಾರತದಲ್ಲಿ ಇರುವ ಜನಸಂಖ್ಯೆ ಎಷ್ಟು ಎಂಬ ಬಗ್ಗೆ ಅದರ ಬಳಿ ಯಾವುದೇ ನಿರ್ದಿಷ್ಟ ಅಧಿಕೃತ ದತ್ತಾಂಶ ಇಲ್ಲ. ಭಾರತದಲ್ಲಿ ಪ್ರತಿ ದಶಕಕ್ಕೆ ಒಮ್ಮೆ ಜನಗಣತಿ ನಡೆಸುವುದು ವಾಡಿಕೆ. ಆದರೆ 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಅದು ವಿಳಂಬವಾಗಿತ್ತು.