Connect with us

    LATEST NEWS

    ಪ್ರಮೋದ್ ಮುತಾಲಿಕ್ – ಆಸ್ತಿಗಿಂತ ಪೊಲೀಸ್ ಕೇಸ್ ಗಳೇ ಜಾಸ್ತಿ…!!

    ಉಡುಪಿ ಎಪ್ರಿಲ್ 19: ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ಕೋಟಿಗಟ್ಟಲೆ ಆಸ್ತಿ ಇರುವ ತಮ್ಮ ಅಫಿದವಿತ್ ನಲ್ಲಿ ನಮೂದಿಸಿದರೆ. ಕಾರ್ಕಳದಲ್ಲಿ ತಮ್ಮ ಶಿಷ್ಯನ ವಿರುದ್ದ ನಿಂತಿರುವ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಬಳಿ ಆಸ್ತಿಗಿಂತ ಕೇಸ್ ಗಳೇ ಜಾಸ್ತಿ ಇವೆ.


    ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಸುನಿಲ್ ಕುಮಾರ್ ಎದುರು ಸ್ಪರ್ಧೆ ಮಾಡುತ್ತಿದ್ದಾರೆ,. ಭಾರೀ ಹೈವೋಲ್ಟೇಜ್ ಕ್ಷೇತ್ರವಾಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಮುತಾಲಿಕ್‌ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ನಿಯಮದಂತೆ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.

    ಹಿಂದೂ ಸಂಘಟನೆ ಸಮಾಜ ಸೇವೆಯನ್ನೇ ತಮ್ಮ ಜೀವನವಾಗಿಸಿಕೊಂಡಿರುವ ಪ್ರಮೋದ್‌ ಮುತಾಲಿಕ್‌ ಅವರ ಒಟ್ಟಾರೆ ಆಸ್ತಿ ಮೌಲ್ಯ 2,63,500 ರೂಪಾಯಿ ಮಾತ್ರ. ಈ ಪೈಕಿ 2.5 ಲಕ್ಷದ ಒಂದು ಬಾಂಡ್‌ ಇದ್ದು, 10500 ರೂಪಾಯಿ ಕೈಯಲ್ಲಿ ನಗದು ಇದೆ. ಇನ್ನು ಬ್ಯಾಂಕ್‌ ಒಂದರಲ್ಲಿ ಮೂರು ಸಾವಿರ ರೂಪಾಯಿ ಉಳಿತಾಯವಿದೆ.


    ಪ್ರಮೋದ್‌ ಮುತಾಲಿಕ್‌ ಅವರಿಗೆ ಪತ್ನಿ, ಕುಟುಂಬ ಇಲ್ಲ. ಯಾರೂ ಅವಲಂಬಿತರೂ ಇಲ್ಲ. ಉಳಿದಂತೆ ಅವರ ಹೆಸರಲ್ಲಿ ಯಾವುದೇ ಜಮೀನು, ನಿವೇಶನ, ಮನೆ, ವಾಹನ, ಚಿನ್ನಭರಣ, ಸಾಲ, ದುಬಾರಿ ವಸ್ತುಗಳು ಇಲ್ಲ. ಆದಾಯ ಮೂಲವನ್ನು ದೇಣಿಗೆ ಸಂಗ್ರಹ, ಉದ್ಯೋಗ ಸಮಾಜಸೇವೆ ಎಂದು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ತಿಳಿಸಿದ್ದಾರೆ. ಯಾದಗಿರಿ, ಶೃಂಗೇರಿ, ಬೆಂಗಳೂರು, ಬಬಲೇಶ್ವರ, ಬಾಗಲಕೋಟೆ ನವನಗರ, ಜೇವರ್ಗಿ ಹಾಗೂ ಮುರುಡೇಶ್ವರ ಸೇರಿ ಏಳು ಪೊಲೀಸ್‌ ಠಾಣೆಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಕೇಸ್‌ ಪ್ರಮೋದ್‌ ಮುತಾಲಿಕ್‌ ವಿರುದ್ಧ ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ, ಮಾನನಷ್ಟ ಮೊಕದ್ದಮೆ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೋಮು ಗಲಭೆ, ಜೀವ ಬೆದರಿಕೆ, ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ ಕೇಸ್‌ಗಳು ದಾಖಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply