LATEST NEWS
ಜಮ್ಮು ಕಾಶ್ಮೀರದಲ್ಲಿ 2.26 ಲಕ್ಷ ರೂಪಾಯಿಗೆ ಹರಾಜಾದ ಒಂದು ಮೊಟ್ಟೆ…!!
ಜಮ್ಮುಕಾಶ್ಮೀರ ಎಪ್ರಿಲ್ 16: ಒಂದು ಮೊಟ್ಟೆ ಬರೋಬ್ಬರಿ 2 ಲಕ್ಷ ರೂಪಾಯಿಗೆ ಹರಾಜಾದ ಘಟನೆ ಜಮ್ಮು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ನಡೆದಿದ್ದು, ಈ ಸುದ್ದಿ ಇದೀಗ ವೈರಲ್ ಆಗಿದೆ. ಈ ಮೊಟ್ಟೆ ಇಷ್ಟು ಬೆಲೆಗೆ ಹರಾಜಾಗಲು ಕಾರಣ ಒಂದು ಮಸೀದಿ.
ಇದು ಸೋಪೋರ್ ಬಳಿಯ ಮಲ್ಪೋರ್ ಗ್ರಾಮದಲ್ಲಿ ನಡೆದ ಘಟನೆ ,ಮಲ್‌ಪೋರ್ ಮುಸ್ಲಿಂ ಪ್ರಾಬಲ್ಯದ ಪ್ರಾಂತ್ಯ. ಸೋಪೋರ್ ಬಳಿ ಮಸೀದಿಗಳು ಇವೆ. ಆದರೆ ಮಲ್‌ಪೋರ್‌ನಲ್ಲಿ ಮಸೀದಿ ಇಲ್ಲ. ಮುಸ್ಲಿಂ ಸಮುದಾಯ ಪ್ರಾರ್ಥನೆಗೆ ಸೋಪೋರ್‌ಗೆ ತೆರಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮಲ್‌ಪೋರ್‌ನಲ್ಲಿ ಮಸೀದಿ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯ ನಿರ್ಧರಿಸಿದೆ. ಇದಕ್ಕಾಗಿ ಮಸೀದಿ ಸಮಿತಿ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ಈ ವೇಳೆ ಹಲವು ದಾನಿಗಳು ಮಸೀದಿಗಾಗಿ ಹಣ ನೀಡಿದ್ದಾರೆ. ಆದರೆ ಹಣ ಇಲ್ಲದವರು ವಸ್ತುಗಳ ರೂಪದಲ್ಲಿ ದಾನ ಮಾಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಒಂದು ಮೊಟ್ಟೆಯನ್ನು ದಾನ ಮಾಡಿದ್ದರು. ಈ ಹಿನ್ನಲೆ ಮಸೀದಿ ಸಮಿತಿ ವಸ್ತುಗಳನ್ನು ಹರಾಜು ಮಾಡಿ ಹಣ ಸಂಗ್ರಹಕ್ಕೆ ಮುಂದಾಗಿತ್ತು, ಈ ವಸ್ತುಗಳ ಹರಾಜಿನಲ್ಲಿ ಬರವು ಹಣವನ್ನು ಮಸೀದಿ ನಿರ್ಮಾಣಕ್ಕೆ ಬಳಸಿಕೊಳ್ಳುವುದಾಗಿ ಘೋಷಿಸಿತು.
ಹರಾಜಿನ ದಿನ ದಾನಿಗಳು ನೀಡಿ ವಸ್ತುಗಳ ಒಳ್ಳೆ ಮೊತ್ತಕ್ಕೆ ಸೇಲ್ ಆಗಿದ್ದವು, ಈ ವೇಳೆ ಮಹಿಳೆ ನೀಡಿದ ಮೊಟ್ಟೆ ಹರಾಜಿಗೆ ಕೂಗುತ್ತಿದ್ದಂತೆ ಪವಾಡವೆಂಬಂತೆ ಸಾವಿರ ರೂಪಾಯಿಯಿಂದ ಹರಾಜು ಬೆಲೆ ಆರಂಭಗೊಂಡಿದೆ. ನೋಡ ನೋಡುತ್ತಿದ್ದಂತೆ ಲಕ್ಷ ರೂಪಾಯಿ ದಾಟಿದೆ. ಕೊನೆಗೆ 2.26 ಲಕ್ಷ ರೂಪಾಯಿಗೆ ಮೊಟ್ಟೆ ಹರಾಜಾಗಿದೆ. ಉದ್ಯಮಿ ದಾನೀಶ್ ಅಹಮ್ಮದ್ ಈ ಮೊಟ್ಟೆ ಖರೀದಿಸಿದ್ದಾರೆ. ಅಂತಿಮವಾಗಿ ದಾನೀಶ್ ಅಹಮ್ಮದ್ 2,26,350 ರೂಪಾಯಿಗೆ ಹರಾಜಿನಲ್ಲಿ ಮೊಟ್ಟೆ ಖರೀದಿಸಿದ್ದಾರೆ.