Connect with us

    KARNATAKA

    ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ: ಪೊನ್ನಂಪೇಟೆ ಬಿಸಿಎಂ ಅಧಿಕಾರಿ ಅಮಾನತು

    ಮಡಿಕೇರಿ, ಏಪ್ರಿಲ್ 09: ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್.ಟಿ ಮಲ್ಲಿಕಾರ್ಜುನ್ ಅವರು ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಆಗಾಗ್ಗೆ ಭೇಟಿ ನೀಡಿ, ನಿಲಯದ ಶೌಚಾಲಯಗಳನ್ನು ಬಳಸುವುದಲ್ಲದೆ, ವಿದ್ಯಾರ್ಥಿನಿಯರು ಮಲಗಿರುವ ವೇಳೆ ದಿಢೀರಾಗಿ ಕೋಣೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವ ಬಗ್ಗೆ ಟೀಕೆ ವ್ಯಕ್ತಪಡಿಸಿ ಅಸಭ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಅನೇಕ ಬಾರಿ ಹಿರಿಯ ಅಧಿಕಾರಿಗಳು ಮೌಖಿಕವಾಗಿ ತಾಲೂಕು ಅಧಿಕಾರಿಗಳಾದ ಮಲ್ಲಿಕಾರ್ಜುನರವರಿಗೆ ತಿಳಿ ಹೇಳಿದರೂ ಪ್ರಯೋಜನವಾಗಿರಲಿಲ್ಲ. ನಿಲಯದ ವಿದ್ಯಾರ್ಥಿನಿಯರು ಇದರಿಂದ ನೊಂದು ತಮ್ಮ ನೋವನ್ನು ಸ್ಥಳೀಯ ಪೊನ್ನಂಪೇಟೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ ಅಚ್ಚುತ್ತನ್ ಬಳಿ ತೋಡಿಕೊಂಡಿದ್ದರು. ಅಲ್ಲದೆ ವಿದ್ಯಾರ್ಥಿನಿಯರು ಲಿಖಿತವಾಗಿ ಪತ್ರ ನೀಡಿದ್ದರು. ಪತ್ರದ ಆಧಾರದ ಮೇಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವೇಳೆ ಸಮಸ್ಯೆಯ ಗಂಭೀರತೆ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ಬಂದಿದೆ.

    ಇದರಿಂದ ಎಚ್ಚೆತ್ತ ಕೊಡಗು ಜಿ.ಪಂ ಸದಸ್ಯರು ಬಿಸಿಎಂ ಅಧಿಕಾರಿಗೆ ತಕ್ಕ ಶಾಸ್ತಿ ನೀಡಲು ಮುಂದಾದ್ದಾರೆ. ಅಧಿಕಾರಿಯಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬೆಂಗಳೂರಿನ ಆಯುಕ್ತರಿಗೆ ಪತ್ರ ಬರೆದು ಇಲ್ಲಿಯ ಮಾಹಿತಿಗಳನ್ನು ರವಾನಿಸಿದರು.

    ಆಯುಕ್ತರು ಜಿ.ಪಂ ಸದಸ್ಯರ ಪತ್ರಕ್ಕೆ ಮನ್ನಣೆ ನೀಡಿ ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಧಿಕಾರಿಗಳ ವರದಿಯ ಹಿನ್ನೆಲೆಯಲ್ಲಿ ಆಯುಕ್ತರು ಕರ್ತವ್ಯ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ, ನಿಲಯಗಳ ಸುಗಮ ನಿರ್ವಹಣೆಯಲ್ಲಿ ವಿಫಲತೆ, ವಿದ್ಯಾರ್ಥಿ ನಿಲಯದಲ್ಲಿ ಅಸಭ್ಯ ವರ್ತನೆ, ಹಿನ್ನೆಲೆಯಲ್ಲಿ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply