LATEST NEWS
ಕುಕ್ಕೆ ಸುಬ್ರಹ್ಮಣ್ಯ ಗಲಾಟೆ ಗುರುಪ್ರಸಾದ್ ಪಂಜ ವಶಕ್ಕೆ ಪಡೆದ ಪೊಲೀಸರು
ಕುಕ್ಕೆ ಸುಬ್ರಹ್ಮಣ್ಯ ಗಲಾಟೆ ಗುರುಪ್ರಸಾದ್ ಪಂಜ ವಶಕ್ಕೆ ಪಡೆದ ಪೊಲೀಸರು
ಪುತ್ತೂರು ಅಕ್ಟೋಬರ್ 31: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸಂಪುಟ ನರಸಿಂಹ ಮಠದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಘಟನೆ ಹಿನ್ನಲೆಯಲ್ಲಿ ಪೋಲೀಸರು ಗುರುಪ್ರಸಾದ್ ಪಂಜ ಅವರನ್ನು ವಶಕ್ಕೆ ಪಡೆದಿದ್ದಾರೆ.
ಗುರುಪ್ರಸಾದ್ ವಿರುದ್ಧ ಈಗಾಗಲೇ ಘಟನೆಯಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಮಾನಭಂಗ ಪ್ರಕರಣ ದಾಖಲಿಸಿದ್ದರು. ಅಕ್ಟೋಬರ್ 25 ರಂದು ಫೇಸ್ಬುಕ್ ನಲ್ಲಿ ತನ್ನ ಬಗ್ಗೆ ಅವಹೇಳನಕಾರಿ ಕಮೆಂಟ್ ಮಾಡಲಾಗಿದೆ ಎಂದು ಆರೋಪಿಸಿ ಚೈತ್ರಾ ಕುಂದಾಪುರ ತನ್ನ ತಂಡದೊಂದಿಗೆ ಸುಬ್ರಹ್ಮಣ್ಯ ಕ್ಕೆ ಬಂದು ಗುರುಪ್ರಸಾದ್ ಪಂಜ ಹಾಗೂ ಅತನ ಸ್ನೇಹಿತರ ಜೊತೆಗೆ ಮಾರಾಮಾರಿ ನಡೆಸಿತ್ತು.
ಈ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಅವರ ತಲೆಗೆ ಗಾಯಗಳಾಗಿದ್ದರ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಚೈತ್ರಾ ಕುಂದಾಪುರ ನೀಡಿದ ದೂರಿನ ಮೇಲೆ ಸುಬ್ರಹ್ಮಣ್ಯ ಪೋಲೀಸರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುಪ್ರಸಾದ್ ರನ್ನು ವಶಕ್ಕೆ ಪಡೆದಿದ್ದಾರೆ.
ಗುರುಪ್ರಸಾದ್ ಮೇಲೆ ಹಲ್ಲೆ ನಡೆಸಿದ ದೂರಿಗೆ ಸಂಬಂಧಿಸಿ ಸುಬ್ರಹ್ಮಣ್ಯ ಪೋಲೀಸರು ಚೈತ್ರಾ ಕುಂದಾಪುರ ಹಾಗೂ ಆಕೆಯ ಆರು ಮಂದಿ ಸಹಚರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸುದ ಸುಳ್ಯ ಜೆಎಂಎಫ್ಸಿ ನ್ಯಾಯಾಲಯ ಆರೋಪಿಗಳಿಗೆ ನವೆಂಬರ್ 3 ವರೆಗೆ ನ್ಯಾಯಾಂಗ ಬಂಧನದ ತೀರ್ಪು ನೀಡಿದೆ.
ಈ ನಡುವೆ ಎರಡೂ ತಂಡಗಳು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಸಂಘ ಪರಿವಾರದ ಮುಖಂಡರು ಮಂಗಳವಾರ ಎರಡೂ ತಂಡಗಳ ನಡುವೆ ಮಾತುಕತೆಯನ್ನೂ ನಡೆಸಿದ್ದರು.
ಮಾತುಕತೆಗೆ ಆಗಮಿಸಿದ್ದ ಚೈತ್ರಾ ಕುಂದಾಪುರ ಹಾಗೂ ಗುರುಪ್ರಸಾದ್ ಪಂಜ ಪರ ತಂಡ ರಾಜಿ ಸಂಧಾನದಲ್ಲಿ ಮುಗಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಗುರುಪ್ರಸಾದ್ ಪಂಜ ತಂಡ ಒಂದು ದಿನದ ಅವಕಾಶವನ್ನು ನೀಡುವಂತೆ ಮನವಿ ಮಾಡಿದ್ದರು. ಆದರೆ ಇಂದು ಪೋಲೀಸರು ಗುರುಪ್ರಸಾದ್ ಪಂಜ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.