ಮಂಗಳೂರಿಗೆ ಕೋಕೆನ್ ಸರಬರಾಜು ಮಾಡುತ್ತಿದ್ದ ಕಿಂಗ್ ಪಿನ್ ಆರೆಸ್ಟ್
ಮಂಗಳೂರು ಅಕ್ಟೋಬರ್ 31: ಮಂಗಳೂರಿಗೆ ಕೋಕೆನ್ ಸರಬರಾಜು ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಗೋವಾ ನಿವಾಸಿ ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.
ಅಗಸ್ಟ್ ತಿಂಗಳಲ್ಲಿ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮರೋಳಿ ಬಳಿಯಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಕೋಕೆನ್ ನ್ನು ಹೊಂದಿದ 5 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ರೂ. 70,000/- ಮೌಲ್ಯದ ಮಾದಕ ವಸ್ತುವಾದ ಕೋಕೆನ್ ಮೂರು ಕಾರು, ನಗದು ಹಣ ಮತ್ತು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಪ್ರಕರಣದಲ್ಲಿನ ಆರೋಪಿಗಳಿಗೆ ಗೋವಾದಿಂದ ಮಾದಕ ವಸ್ತುವಾದ ಕೋಕೆನ್ ನ್ನು ಪೂರೈಕೆ ಮಾಡಿದ ವ್ಯಕ್ತಿಯು ತಲೆ ಮರೆಸಿಕೊಂಡಿದ್ದನು. ಈ ಆರೋಪಿಯ ಬಗ್ಗೆ ಮಾಹಿತಿ ಪಡೆದ ಮಂಗಳೂರು ನಗರ ಸಿಸಿಬಿ ಪೊಲೀಸರು ಮತ್ತು ಮಂಗಳೂರು ಪೂರ್ವ ಠಾಣೆ ಯ ಪೊಲೀಸರು ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಈತನು ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಕೋಕೆನ್ ನ್ನು ಮಾರಾಟ ಮಾಡುತ್ತಿದ್ದನು. ಈತನ ವಿರುದ್ಧ ಈ ಹಿಂದೆ ನಕಲಿ ಪಾಸ್ ಪೋರ್ಟ್ ಹೊಂದಿದ ಬಗ್ಗೆ 2008 ನೇ ಇಸವಿಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.