LATEST NEWS
ಕ್ಯಾನ್ಸರ್ ಗೆ ಬಲಿಯಾದ ಪೊಲೀಸ್ ಶ್ವಾನ ಸುಧಾಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ…!!
ಮಂಗಳೂರು ಜುಲೈ 24: ಅನಾರೋಗ್ಯದಿಂದ ಸಾವನ್ನಪ್ಪಿದ ಪೋಲೀಸ್ ಶ್ವಾನವೊಂದಕ್ಕೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಕ್ರಿಯೆ ನಡೆಸಲಾಗಿದೆ. ಮಂಗಳೂರು ಪೋಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಅಪರಾಧ ಪತ್ತೆಯಲ್ಲಿ ತನ್ನನ್ನು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ವಾನ ಇದಾಗಿದೆ. ಮಂಗಳೂರು ಪೋಲೀಸ್ ಕಮಿಷನರ್ ಸೇರಿದಂತೆ ಹಲವು ಉನ್ನತ ಶ್ರೇಣಿಯ ಅಧಿಕಾರಿಗಳು ಈ ಅಂತಿಮನಮನ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಶ್ವಾನಕ್ಕೆ ವಿದಾಯ ಹೇಳಿದರು.
ಸುಧಾ ಎನ್ನುವ ಹೆಸರಿನ ಈ ಶ್ವಾನ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಎತ್ತಿದ ಕೈಯಾಗಿದ್ದಳು. ಕೊಲೆ, ಸುಲಿಗೆ, ಕಳ್ಳತನ ಹೀಗೆ ಸಾವಿರಾರು ಪ್ರಕರಣಗಳನ್ನು ಭೇಧಿಸುವಲ್ಲಿ ಈಕೆಯ ಪಾತ್ರ ಪ್ರಮುಖವಾಗಿತ್ತು. ಆದರೆ ಇನ್ನು ಈ ಶ್ವಾನದ ನೆನಪು ಮಾತ್ರ ಉಳಿದಿದ್ದು, ಅನಾರೋಗ್ಯ ಕಾರಣದಿಂದಾಗಿ ಸುಧಾ ಸಾವನ್ನಪ್ಪಿದೆ. ಡಾಬರ್ ಮಾನ್ ಜಾತಿಯ ಈ ಶ್ವಾನ ಕಳೆದ ಹತ್ತು ವರ್ಷಗಳಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಶ್ವಾನ ದಳದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಕರ್ತವ್ಯದ ವೇಳೆಯೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಸುಧಾಗೆ ಸಕಲ ಸರಕಾರಿ ಗೌರವಗಳ ಜೊತೆ ಈ ಶ್ವಾನದ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗಿದ್ದು, ಈ ವೇಳೆ ಶ್ವಾನದಳದ ಸಿಬ್ಬಂದಿಗಳು ತನ್ನ ಅಚ್ಚುಮೆಚ್ಚಿನ ಶ್ವಾನದ ಅಗಲುವಿಕೆಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ.
ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಗ್ರಹಿಸುವಲ್ಲಿ ಅತ್ಯಂತ ಸೂಕ್ಷ್ಮವಾಗಿದ್ದ ಸುಧಾ ತನ್ನ ಹತ್ತು ವರ್ಷದ ಸೇವೆಯ ಅವಧಿಯಲ್ಲಿ ಸಾವಿರಾರು ಕ್ಲಿಷ್ಟಕರವಾದ ಪ್ರಕರಣಗಳನ್ನು ಭೇಧಿಸುವಲ್ಲಿ ಪೋಲೀಸರಿಗೆ ನೆರವಾಗಿದೆ. ಸ್ವತಹ ಮಂಗಳೂರು ಕಮಿಷನರ್ ಶಶಿಕುಮಾರ್ ಶ್ವಾನದ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುವ ಮೂಲಕ ಈ ಶ್ವಾನದ ಸೇವೆಯನ್ನು ಕೊಂಡಾಡಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಶ್ವಾಸಕೋಶದಲ್ಲಿ ಗಡ್ಡೆಯಂತಹ ವಸ್ತು ಪತ್ತೆಯಾಗಿತ್ತು. ಆ ಬಳಿಕ ನಿರಂತರವಾಗಿ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಕಳೆದ ಎರಡು ದಿನಗಳಿಂದ ಯಾವುದೇ ಆಹಾರ ಸೇವಿಸದೆ ಸುಧಾ ಸಂಪೂರ್ಣ ಬಡವಾಗಿತ್ತು. ಮಂಗಳೂರು ಕಮಿಷನರೇಟ್ ನ ಶ್ವಾನದಳಕ್ಕೆ ಈ ಶ್ವಾನ ಸೇರ್ಪಡೆಯಾದಂದಿನಿಂದ ಈ ಶ್ವಾನದ ಆರೈಕೆ ಮಾಡುತ್ತಿದ್ದ ಸಿಬ್ಬಂದಿಗಳು ಸುಧಾಳ ನಿಸ್ವಾರ್ಥ ಸೇವೆ ಹಾಗೂ ಚಾಣಾಕ್ಷತನವನ್ನು ಬಾಯಿತುಂಬಾ ಹೊಗಳುತ್ತಾರೆ. ಸುಧಾಳ ಆರೈಕೆ ಮಾಡುತ್ತಿದ್ದ ಶ್ವಾನದಳದ ಹೆಡ್ ಕಾನ್ ಸ್ಟೇಬಲ್ ಸಂದೀಪ್ ಕಣ್ಣೀರಿನಲ್ಲೇ ಅಗಲಿದ ತನ್ನ ನೆಚ್ಚಿನ ಶ್ವಾನಕ್ಕೆ ಅಂತಿಮ ವಿದಾಯ ಸಲ್ಲಿಸಿರುವುದು ನೆರೆದಿದ್ದವರ ಕಣ್ಣಂಚಿನಲ್ಲಿ ನೀರು ಹರಿಯುವಂತೆ ಮಾಡಿದೆ. ಸ್ವತಹ ಪೋಲೀಸ್ ಕಮಿಷನರ್ ಶಶಿಕುಮಾರ್ ಸಂದೀಪ್ ಗೆ ಸಾಂತ್ವಾನ ಹೇಳುವ ಮೂಲಕ ಸಂತೈಸಿದ್ದಾರೆ.