DAKSHINA KANNADA
ಜವರಾಯನಾಗಿ ಕಾಡುತ್ತಿದೆ ಖಾಸಗಿ ಬಸ್ : ಕ್ರಮ ಕೈಗೊಳ್ಳಲು ಪೋಲೀಸರಿಗೆ ನರ ದೌರ್ಬಲ್ಯ.

ಜವರಾಯನಾಗಿ ಕಾಡುತ್ತಿದೆ ಖಾಸಗಿ ಬಸ್ : ಕ್ರಮ ಕೈಗೊಳ್ಳಲು ಪೋಲೀಸರಿಗೆ ನರ ದೌರ್ಬಲ್ಯ.
ಮಂಗಳೂರು, ಡಿಸೆಂಬರ್ 04 : ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರ ರಂಪಾಟ ಮಿತಿ ಮೀರಲಾರಂಭಿಸಿದೆ.
ಒಂದೆಡೆ ಟೈಮಿಂಗ್ ಕಾರಣ ನೀಡಿದರೆ, ಇನ್ನೊಂದೆಡೆ ಎಕ್ಸ್ ಪ್ರೆಸ್ ಎನ್ನುವ ಬೋರ್ಡ್ ನೇತಾಡಿಸಿಕೊಂಡು ಇತರ ವಾಹನಗಳ ಮೇಲೆ ಹತ್ತಿಸಿಕೊಂಡು ಹೋಗುವ ಪರವಾನಗಿ ಪಡೆದಂತೆ ಈ ಬಸ್ ಗಳ ಚಾಲಕರು ವರ್ತಿಸಲಾರಂಭಿಸಿದ್ದಾರೆ.

ತನ್ನ ಎದುರು ಹೋಗುತ್ತಿರುವ ವಾಹನಗಳನ್ನು ಹಿಂದಿಕ್ಕಬೇಕೆಂಬ ಧಾವಂತದಲ್ಲಿ ಈ ಬಸ್ ಚಾಲಕರು ಎಸಗಿದ ಅಫಘಾತಗಳಿಗೆ ಲೆಕ್ಕವಿಲ್ಲ. ಮಂಗಳೂರು ನಗರದ ಮಧ್ಯೆ ವೇಗಮಿತಿ 30 ಕಿಲೋಮೀಟರ್ ಆಗಿದ್ದರೂ ಈ ಬಸ್ ಗಳು ಸಂಚರಿಸೋದು ಮಾತ್ರ 80 ರಲ್ಲೇ..!
ಈ ವೇಗದಲ್ಲಿ ಈ ಬಸ್ ಗಳ ಮುಂದೆ ಬರುವ ವಾಹನಗಳು ಒಂದೋ ಫುಟ್ಪಾತ್ ನಲ್ಲಿ ಸಂಚರಿಸಬೇಕು ಇಲ್ಲವೇ ಬಸ್ ನ ಅಡಿಗೆ ಬಿದ್ದು ಪುಡಿಯಾಗಬೇಕು ಎನ್ನುವ ನಿಯಮವನ್ನು ಖಾಸಗಿ ಬಸ್ ಚಾಲಕರು ಇತ್ತೀಚಿನ ದಿನಗಳಲ್ಲಿ ಒತ್ತಾಯಪೂರ್ವಕವಾಗಿ ಜಾರಿಗೆ ತಂದಂತಿದೆ.
ತಾವು ಬ್ರೇಕ್ ಹಾಕಿದಲ್ಲಿ ಬಸ್ ನಿಲ್ದಾಣ, ತಾವು ಹೋದಲ್ಲಿ ರಸ್ತೆ ಎನ್ನುವ ಖಾಸಗಿ ಬಸ್ ಚಾಲಕರ ತುಘಲಕ್ ದರ್ಬಾರ್ ಇಂದು ಮಂಗಳೂರನ್ನು ಆಳುತ್ತಿದೆ ಎನ್ನುವ ಮಟ್ಟಿಗೆ ಈ ಬಸ್ ಗಳ ಉಪಟಳವಿದೆ.
ಅತಿ ವೇಗದ, ಅಜಾಗರೂಕತೆಯ ಚಾಲನೆ ಮಾಡಿ ಇತರ ವಾಹನಗಳಿಗೆ ಹಾನಿ ಉಂಟಾದರೆ ಈ ಚಾಲಕರನ್ನು ಪ್ರಶ್ನಿಸುವಂತಿಲ್ಲ.
ರೌಡಿಗಳಂತೆ ಮೇಲೆರೆಗುವ ಈ ಚಾಲಕರು ತಮ್ಮ ಸೇಫ್ಟಿಗಾಗಿ ತಮ್ಮ ಸೀಟ್ ನ ಮುಂದುಗಡೆ ಇಬ್ಬರು, ಮೂವರು ಸಮರ್ಥಕರನ್ನು ಎಂದಿಗೂ ಇಟ್ಟುಕೊಂಡಿರುತ್ತಾರೆ.
ಪೋಲೀಸರ ದೌರ್ಬಲ್ಯ :
ಖಾಸಗಿ ಬಸ್ ಗಳ ಈ ರೀತಿಯ ಸ್ವೇಚ್ಛಾಚಾರವನ್ನು ತಡೆಯುವಲ್ಲಿ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪೋಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಇದಕ್ಕೊಂದು ಪ್ರಮುಖ ಉದಾಹರಣೆಯಾಗಿ ಮೊನ್ನೆ ಬೆಂದೂರ್ ವೆಲ್ ನಲ್ಲಿ ನಡೆಯುತ್ತಿರುವ ವರ್ತಮಾನವನ್ನೇ ಪರಿಗಣಿಸಬಹುದಾಗಿದೆ. ಇಲ್ಲಿ ಬಸ್ ಗಳ ನಿಲುಗಡೆಗಾಗಿ ಸುಸಜ್ಜಿತ ಬಸ್ ನಿಲ್ದಾಣಗಳನ್ನು ಮಾಡಲಾಗಿದೆ.
ಎಲ್ಲಾ ಬಸ್ ಗಳು ನಿಲ್ದಾಣದಲ್ಲೇ ನಿಲ್ಲಬೇಕೆಂಬ ಫರ್ಮಾನನ್ನೂ ಪೋಲೀಸ್ ಇಲಾಖೆ ಈಗಾಗಲೇ ಹೊರಡಿಸಿದೆ. ಆದರೆ ಇಲಾಖೆಗೆ ಬಸ್ ಚಾಲಕರನ್ನು ನಿಲ್ದಾಣದಲ್ಲಿ ನಿಲ್ಲಿಸಲು ಸಾಧ್ಯವೇ ಆಗಿಲ್ಲ.
ಸ್ಥಳದಲ್ಲಿ ಪೋಲೀಸರಿದ್ದಾಗ ಮಾತ್ರ ನಿಲ್ದಾಣದಲ್ಲಿ ನಿಲ್ಲಿಸುವ ಈ ಚಾಲಕರು ಪೋಲೀಸರು ಇಲ್ಲ ಎಂದಾದಾಗ ರಸ್ತೆಯಲ್ಲೇ ಗಂಟೆಗಟ್ಟಲೆ ಬಸ್ ಗಳನ್ನು ನಿಲ್ಲಿಸಿ ವಾಹನ ದಟ್ಟಣೆಗೆ ಕಾರಣರಾಗುತ್ತಾರೆ. ಆ ಮೂಲಕ ಉಳಿದವರನ್ನು ರಸ್ತೆಯಲ್ಲೇ ಸಿಕ್ಕಿಸಿ ಹಾಕಿಕೊಳ್ಳುದರೊಂದಿಗೆ ಪರಿಸರ ಮಾಲಿನ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ.
ಆದರೆ ಪೋಲೀಸರು ಒಂದೋ , ಎರಡೋ ಬಾರಿ ಬಸ್ ಚಾಲಕರಿಗೆ ಕೇಸು ಹಾಕಿ ಸುಮ್ಮನಾಗುತ್ತಿರುವರಿಂದ ಈ ಬಸ್ ಚಾಲಕರಿಗೆ ಕೇಸು ಹಾಕಿಸಿಕೊಳ್ಳುವುದೊಂದು ಚಾಳಿಯಂತಾಗಿದೆ.
ನಿಯಮ ಮೀರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸದ ಬಸ್ ಗಳನ್ನು ಸಿ.ಸಿ.ಕ್ಯಾಮಾರಾ ಗಳ ಮುಖಾಂತರ ಗುರುತಿಸಿ ನಾಲ್ಕು ದಿನ ಪೋಲೀಸ್ ಠಾಣೆಯಲ್ಲೇ ನಿಲ್ಲಿಸುತ್ತಿದ್ದಲ್ಲಿ ಈ ಬಸ್ ಚಾಲಕರಿಗೆ ಹಾಗೂ ಮಾಲಕರಿಗೆ ಬುದ್ಧಿ ಬರಬಹುದಿತ್ತು.
ಆದರೆ ಈ ರೀತಿಯ ಪ್ರಜ್ಞೆ ಕಿರಿಯ ಹಾಗೂ ಹಿರಿಯ ಪೋಲೀಸ್ ತೋರದಿರುವುದು ಮಾತ್ರ ಜಿಲ್ಲೆಯ ಜನರ ದುರಂತವಾಗಿದೆ.
ಕಾನೂನು ಮೀರಿ ವರ್ತಿಸುವ ಇಂಥ ಬಸ್ ಚಾಲಕರ ಮೇಲೆ ಪೋಲೀಸರು ಕ್ರಮ ಕೈಗೊಳ್ಳದೇ ಹೋದಲ್ಲಿ ಇದೇ ವಿಚಾರ ಮುಂದಿನ ದಿನಗಳಲ್ಲಿ ಸಂಘರ್ಷಕ್ಕೂ ಕಾರಣವಾಗುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.