LATEST NEWS
ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತನ ಮೇಲೆ ರಾಕ್ಷಸೀ ಪ್ರವೃತ್ತಿ ಮೆರೆದ ಸುಳ್ಯ ಪೊಲೀಸ್ ಇನ್ಸ್ಪೆಕ್ಟರ್

ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತನ ಮೇಲೆ ರಾಕ್ಷಸೀ ಪ್ರವೃತ್ತಿ ಮೆರೆದ ಸುಳ್ಯ ಪೊಲೀಸ್ ಇನ್ಸ್ಪೆಕ್ಟರ್
ಸುಳ್ಯ ಡಿಸೆಂಬರ್ 6: ಫೈನಾನ್ಸ್ ಮಾಫಿಯಾದ ಆಮಿಷಕ್ಕೆ ಒಳಗಾಗಿ ಪೊಲೀಸ್ ಇನ್ಸ್ ಪೆಕ್ಟರ್ ಕೃಷಿಕನ ಮೇಲೆ ಅಟ್ಟಹಾಸ ಮೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಸುಳ್ಯ ಠಾಣಾ ಇನ್ಸ್ ಪೆಕ್ಟರ್ ಮಂಜುನಾಥ್ ರಾಕ್ಷಸೀ ಪ್ರವೃತ್ತಿ ಮೆರೆದ ಅಧಿಕಾರಿ.
ದಕ್ಷಿಣ ಕನ್ನಡ-ಕೊಡಗು ಜಿಲ್ಲೆಯ ಗಡಿಭಾಗದ ಬಾಳೆಂಬಿ ನಿವಾಸಿ ಕೃಷಿಕ ರವೀಂದ್ರ, ಅನಧೀಕೃತವಾಗಿರುವ ಸ್ಥಳೀಯ ಫೈನಾನ್ಸ್ ನಲ್ಲಿ ಕೃಷಿಗಾಗಿ ಒಂದು ಲಕ್ಷ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡಲಾಗದೆ ಚಕ್ರ ಬಡ್ಡಿಯ ಸುಳಿಗೆ ಬಿದ್ದ ರವೀಂದ್ರ ನ ವಿರುದ್ದ ಫೈನಾನ್ಸ್ ಮಾಲಕ ಡಿ.ಬಿ ಕೇಶವ ಸುಳ್ಯ ಕೋರ್ಟ್ ನಲ್ಲಿ ದೂರು ನೀಡಿದ್ದರು.

ಈ ಬಗ್ಗೆ ಜಿಲ್ಲಾ ನ್ಯಾಯಾಲದಲ್ಲಿ ಅರ್ಜಿ ಹಾಕಿದ್ರೂ ರವೀಂದ್ರ ಅವರಿಗೆ ನ್ಯಾಯಾಲದಲ್ಲಿ ಸೋಲಾಗಿದೆ. ಸುಳ್ಯ ಕೋರ್ಟ್ ರವೀಂದ್ರ ವಿರುದ್ದ ವಾರೆಂಟ್ ಹೊರಡಿಸುತ್ತಿದ್ದಂತೆಯೇ ಕೃಷಿಕ ರವೀಂದ್ರ ಬೆಂಗಳೂರಿನ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಸ್ಟೇ ಆರ್ಡರ್ ಪಡೆದಿದ್ದರು. ಆರ್ಡರ್ ಸಮೇತ ಡಿಸೆಂಬರ್4 ರಂದು ಮುಂಜಾನೆ ಬೆಂಗಳೂರಿನಿಂದ ಸುಳ್ಯ ಕ್ಕೆ ಆಗಮಿಸುತ್ತಿದ್ದ ವೇಳೆ ಸುಳ್ಯ ಇನ್ಸ್ ಪೆಕ್ಟರ್ ಮಂಜುನಾಥ್ ರವೀಂದ್ರ ಅವರನ್ನು ಠಾಣೆಗೆ ಎಳೆದೊಯ್ದು ಮನಬಂದಂತೆ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ ನಲ್ಲಿ ಥಳಿಸಿದ್ದಾರೆ.
ಕೋರ್ಟ್ ಆದೇಶ ಇದ್ರೂ ಕ್ಯಾರೇ ಮಾಡದೆ ಮುಖ ಮುಸುಡಿ ನೋಡದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರವೀಂದ್ರ ಹೊಟ್ಟೆಯಲ್ಲಿ ಗೆಡ್ಡೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆಯೇ ಪೊಲೀಸ್ ಅಧಿಕಾರಿ ಮನಬಂದಂತೆ ದಾಳಿ ನಡೆಸಿರೋದರಿಂದ ಜರ್ಜತರಾಗಿದ್ದಾರೆ.
ಈ ನಡುವೆ ಇನ್ಸ್ ಪೆಕ್ಟರ್ ಮಂಜುನಾಥ, ರವೀಂದ್ರ ಮನೆಗೆ ಹೋಗಿ ತಾಯಿ ಮತ್ತು ಮಡದಿಗೆ ರಿವಾಲ್ವರ್ ತೋರಿಸಿ ಎನ್ ಕೌಂಟರ್ ಮಾಡೋದಾಗಿ ಬೆದರಿಸಿದ್ದಾರೆ. ನಾನು ಸಚಿವ ಡಿ.ಕೆ ಶಿವಕುಮಾರ್ ಬೆಂಬಲಿಗ ನನ್ನನ್ನು ಯಾರಿಗೂ ಏನೂ ಮಾಡಲಾಗದು ಎಂದು ಬೆದರಿಸಿದ್ದಾರೆ.
ಮಂಜುನಾಥ್ ಕ್ರೌರ್ಯ ದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ದೂರು ನೀಡಿರುವ ರವೀಂದ್ರ ತನಾಗಾಗಿರುವ ಅನ್ಯಾಯ ಕ್ಕೆ ನ್ಯಾಯ ಕೊಡಿಸಬೇಕಾಗಿ ಮನವಿ ಮಾಡಿದ್ದಾರೆ.
ಇನ್ಸ್ ಪೆಕ್ಟರ್ ಮಂಜುನಾಥ್ ಮೇಲೆ ಈ ಹಿಂದೆಯೂ ಜನರೊಡನೆ ಕ್ರೂರವಾಗಿ ನಡೆದುಕೊಂಡಿರುವ ಆರೋಪವಿದ್ದು, ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದರೂ ಇಲಾಖೆ ಮಾತ್ರ ಕಣ್ಣಿದ್ದು ಕುರುಡಾಗಿದೆ.