BELTHANGADI
ಧರ್ಮಸ್ಥಳದ ವಿರುದ್ದ ಹೇಳಿಕೆ – ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅನುಯಾಯಿಗಳ ವಿರುದ್ದ ಧರ್ಮಸ್ಥಳದ ಭಕ್ತರಿಂದ ಕೇಸ್

ಬೆಳ್ತಂಗಡಿ ಮಾರ್ಚ್ 08: ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಧರ್ಮಸ್ಥಳದ ಭಕ್ತರಿಂದ ಕೇಸ್ ದಾಖಲಾಗಿದೆ.
ಫೆಬ್ರವರಿ 8ರಂದು ಬೆಳ್ತಂಗಡಿಯಲ್ಲಿ ನಡೆದ ಹಿಂದೂ ಸಮಾಜ ರಕ್ಷಣಾ ಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ದೇವಾಲಯಗಳ ಬಗ್ಗೆ ಜನರಲ್ಲಿ ಅನುಮಾನ ಹುಟ್ಟಿಸುವ ಹೇಳಿಕೆಗಳನ್ನ ನೀಡಿ ಸಮಾಲ್ಲಿ ಆಶಾಂತಿ ಉಂಟು ಮಾಡುವ ಹೇಳಿಕೆಗಳನ್ನ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಕುರಿತು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬ, ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಅಪಪ್ರಚಾರ ಅಥವಾ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಆದೇಶಿಸಿತ್ತು. ಇದರ ಹೊರತಾಗಿಯೂ ಮಹೇಶ್ ಶೆಟ್ಟಿ ತಿಮರೋಡಿ ಧರ್ಮಸ್ಥಳದ ಬಗ್ಗೆ ಹೇಳಿಕೆಗಳನ್ನ ನೀಡಿದ್ದು, ಶ್ರೀ ಕ್ಷೇತ್ರದ ಭಕ್ತರು ಮನನೊಂದು ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.