LATEST NEWS
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಹೃದಯಾಘಾತದಿಂದ ನಿಧನ

ಮಂಗಳೂರು ಮಾರ್ಚ್ 08: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿದ್ದ ಅವರು ಎರಡು ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದರು. ಕುಂಜತ್ತಬೈಲ್ ವಾರ್ಡ್ ಅನ್ನು ಪ್ರತಿನಿಧಿಸಿದ್ದರು.
ಪಕ್ಷದ ಸಂಘಟನೆಯಲ್ಲಿ ಸಕ್ರಿಯ ತೊಡಗಿಸಿಕೊಂಡಿದ್ದರು. ಅವಿವಾಹಿತರಾಗಿದ್ದ ಅವರು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಮೂಲಕ ವಿವಿಧ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿದ್ದರು. ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು,ಮಾರ್ಗದರ್ಶಕರು ಆಗಿದ್ದ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್ ಅವರ ಅಕಾಲಿಕ ನಿಧನದಿಂದ ಹೋರಾಟ ಸಮಿತಿ ಆಘಾತಕ್ಕೊಳಗಾಗಿದೆ. ಸದಾ ಜನಪರ ವಾಗಿ ಆಲೋಚಿಸುತ್ತಿದ್ದ, ಭ್ರಷ್ಟಾಚಾರದ ಸೋಂಕು ತಗುಲಿಸಿಕೊಳ್ಳದ ಅವರಿಗೆ ಸಮಿತಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಇನ್ನು ಮೊಹಮ್ಮದ್ ಕುಂಜತ್ತಬೈಲ್ ಅವರ ನಿಧನಕ್ಕೆ ಮಾಜಿ ಮೇಯರ್ ಕೆ.ಅಶ್ರಫ್ ತೀವ್ರ ಸಂತಾಪ ಸೂಚಿಸಿದ್ದಾರೆ. ಕೆ.ಮೊಹಮ್ಮದ್ ಕುಂಜತ್ತಬೈಲ್ ರವರು ಓರ್ವ ಕಾಂಗ್ರೆಸ್ ಮುಂದಾಳು ಆಗಿದ್ದು, ಕಾನೂನಾತ್ಮಕ ಮತ್ತು ಶಿಸ್ತು, ಶಿಷ್ಟಾಚಾರ ಬಗ್ಗೆಗಿನ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಹೊಂದಿದ ಓರ್ವ ನಿಷ್ಠಾವಂತ ಕಾರ್ಯಕರ್ತ ಕೂಡಾ ಆಗಿದ್ದರು. ಸರ್ವರೊಂದಿಗೆ ಮುಕ್ತವಾಗಿ ಬೆರೆಯುವ ವ್ಯಕ್ತಿತ್ವದ ಮೊಹಮ್ಮದ್ ಕುಂಜತ್ತಬೈಲು ಅವರ ನಿಧನದಿಂದಾಗಿ ಪಕ್ಷದ ಓರ್ವ ಪ್ರಮುಖ ವ್ಯಕ್ತಿಯನ್ನು ಕಳೆದು ಕೊಂಡಂತಾಗಿದೆ ಎಂದಿದ್ದಾರೆ.