LATEST NEWS
ಟ್ಯಾಕ್ಸಿ ಚಾಲಕರ ಮೇಲೆ ಅಧಿಕಾರಿಗಳ ಕಿರುಕುಳ ಆರೋಪ…..ಈಗ ಸರಕಾರ ಇಲ್ಲ….ಇರೋದು..ಎಲೆಕ್ಷನ್ ಕಮಿಷನ್ ಗಾಡಿನ ಸೀಜ್ ಮಾಡ್ತೀವಿ…!!

ಮಂಗಳೂರು ಮೇ 01: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವ ಹಿನ್ನಲೆ ಇದೀಗ ಚುನಾವಣಾ ಅಧಿಕಾರಿಗಳು ತಮ್ಮ ತಿರುಗಾಟಕ್ಕೆ ಪ್ರವಾಸಿ ವಾಹನಗಳನ್ನು ಬಲವಂತದಿಂದ ಪಡೆಯುತ್ತಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಪೊಲೀಸರ ಈ ಕ್ರಮಕ್ಕೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಚಾಲಕರು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗಲೇ ವಾಹನಗಳನ್ನು ಅಡ್ಡಗಟ್ಟಿ ಅರ್ಧದಾರಿಯಲ್ಲಿ ಇಳಿಸಿ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರ ಈ ಕ್ರಮದ ವಿರುದ್ಧ ಟೂರಿಸ್ಟ್ ಕಾರು ಚಾಲಕ, ಮಾಲಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೀಗ ಅಧಿಕಾರಿಗಳು ವಾಹನಗಳನ್ನು ಪಡೆಯಲು ಟೂರಿಸ್ಟ್ ಟ್ಯಾಕ್ಸಿ ಚಾಲಕ ಮಾಲಕರ ಸಂಘವನ್ನು ಸಂಪರ್ಕಿಸುವ ಅಥವಾ ಟ್ಯಾಕ್ಸಿ ನಿಲ್ದಾಣಗಳಿಗೆ ಭೇಟಿ ನೀಡಿ ವಿಚಾರಿಸುವ ಬದಲು ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಟ್ಯಾಕ್ಸಿಗಳನ್ನು ತಡೆದು ನಿಲ್ಲಿಸಿ ಅದರಲ್ಲಿ ಪೊಲೀಸರನ್ನು ಕುಳ್ಳಿರಿಸಿ ಒತ್ತಾಯ ಪೂರ್ವಕವಾಗಿ ಆರ್‌ಟಿಒ ಕಚೇರಿಗೆ ಕಳುಹಿಸುತ್ತಿರುವ ವಿದ್ಯಮಾನ ನಡೆಯುತ್ತಿದೆ.

ಇಂದು ಅದಾನಿ ಗ್ರೂಪ್‌ನ ದಕ್ಷಿಣ ಭಾರತದ ಸಿಇಒ ಕಿಶೋರ್ ಆಳ್ವಾ ಅವರು ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರು ಜಿಲ್ಲಾಧಿಕಾರಿ ರವಿಕುಮಾರ್ ಅವರನ್ನು ಸಂಪರ್ಕಿಸಿ ಪೊಲೀಸರ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಮುಂಚಿತವಾಗಿ ಬುಕ್ ಮಾಡಿ ಜನರನ್ನು ಅವರ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಪೊಲೀಸರು ತಡೆದು ನಿಲ್ಲಿಸುತ್ತಿರುವ ಬಗ್ಗೆ ಟ್ಯಾಕ್ಸಿ ಚಾಲಕ ಅಥವಾ ಮಾಲಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಕ್ರಮ ಸರಿಯಲ್ಲ ಎಂದವರು ತಿಳಿಸಿದ್ದಾರೆ. ಇಂತಹ ಕಿರುಕುಳವನ್ನು ನಿಲ್ಲಿಸಬೇಕೆಂದು ಜಿಲ್ಲಾಡಳಿತವನ್ನು ಅಗ್ರಹಿಸಿದ್ದಾರೆ.