LATEST NEWS
ಲಂಚ ನೀಡಿಲ್ಲ ಎಂದು 65 ವರ್ಷದ ಟೆಂಪೋ ಚಾಲಕನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ…!!
ಉಡುಪಿ ಎಪ್ರಿಲ್ 10: ಕೇಳಿದ ಲಂಚದ ಹಣ ನೀಡಿಲ್ಲ ಎಂದು ಟೆಂಪೋ ಚಾಲಕನೊಬ್ಬನ ಮೇಲೆ ಶಿರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪೊಲೀಸರಿಂದ ಹಲ್ಲೆಗೊಳಗಾದ ಹಿರಿಯ ಜೀವ ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು 65 ವರ್ಷ ವಯಸ್ಸಿನ ಶೇಖರ್ ಪೂಜಾರಿ ಎಂದು ಗುರುತಿಸಲಾಗಿದ್ದು, ಇವರು ಹನುಮಂತಪ್ಪ ಎಂಬವರ ಮಾಲೀಕತ್ವದ ಟೆಂಪೋವನ್ನು ಶೇಖರ್ ಪೂಜಾರಿ ಚಲಾಯಿಸುತ್ತಿದ್ದು, ವಾಹನ ತಪಸಾಣೆ ನಡೆಸುತಿದ್ದ ಶಿರ್ವ ಪೋಲಿಸ್ ಸಿಬ್ಬಂದಿ ಮೂಡುಬೆಳ್ಳೆಯಲ್ಲಿ ಜಲ್ಲಿ ಸಾಗಾಟ ನಡೆಸುತಿದ್ದ ವೇಳೆ 5೦೦ ರುಪಾಯಿ ಲಂಚ ಕೇಳಿದ್ದು ಈ ವೇಳೆ ಹಣವಿಲ್ಲವೆಂದಾಗ ವಾಹನ ಠಾಣೆಗೆ ತರಲು ಸೂಚಿಸಿ ಚಾಲಕನನ್ನು ಜೀಪ್ ಗೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಎದೆನೋವು, ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು, ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಶಿರ್ವ ಠಾಣೆಯ ಎಸ್ ಐ ಶ್ರೀ ಶೈಲ ಅವರು ಟೆಂಪೋ ಗೆ ಪರವಾನಿಗೆ ಇರಲಿಲ್ಲ ಈ ಕಾರಣದಿಂದ 500 ರೂಪಾಯಿ ದಂಡ ವಿಧಿಸಲಾಗಿದೆ. ಆದರೆ ಚಾಲಕ ದಂಡ ಕಟ್ಟಲು ನಿರಾಕರಿಸಿ ಪೊಲೀಸ್ ಜೀಪ್ ಅಡಿಗೆ ಬಂದು ಮಲಗಲು ಪ್ರಯತ್ನ ಪಟ್ಟರು. ಆ ಸಂದರ್ಭದಲ್ಲಿ ನಾವು ವಾಹನವನ್ನು ಅಲ್ಲಿಯೇ ಬಿಟ್ಟು ಚಾಲಕನನ್ನು ಸ್ಟೇಶನ್ ಗೆ ಕರೆದುಕೊಂಡು ಬಂದು ಮಾಲಕರ ಸಮ್ಮುಖದಲ್ಲಿ ದಂಡ ಕಟ್ಟಿಸಿಕೊಂಡು ಕಳುಹಿಸಿಕೊಟ್ಟಿದ್ದೇವೆ ಎಂದಿದ್ದಾರೆ.