LATEST NEWS
ಮಗನ ಡ್ರಗ್ಸ್ ವ್ಯಸನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಪೋಷಕರು – ಡ್ರಗ್ಸ್ ಸಪ್ಲೈ ಮಾಡಿದ 5 ಮಂದಿ ಅರೆಸ್ಟ್

ಮಂಗಳೂರು, ಜುಲೈ 4: ಮಗ ಡ್ರಗ್ಸ್ ವ್ಯಸನಿಯಾಗಿದ್ದಾನೆ ಎಂದು ಪೋಷಕರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ತನಿಖೆ ನಡೆಸಿದ ಪೊಲೀಸರು ಐವರು ಡ್ರಗ್ಸ್ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದಾರೆ. ಇದರೊಂದಿಗೆ ಸುಮಾರು 200ಕ್ಕೂ ಅಧಿಕ ಮಂದಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿರುವವರು ಕಂಬಿ ಹಿಂದೆ ಬಿದ್ದಿದ್ದಾರೆ.
ಬಂಧಿತರನ್ನು ಮಂಗಳೂರು ನಿವಾಸಿಗಳಾದ ತುಷಾರ್ (21), ಧನ್ವಿ ಶೆಟ್ಟಿ (20), ಸಾಗರ್ ಕರ್ಕೇರಾ (19), ವಿಕಾಸ್ ಥಾಪ (23), ವಿಘ್ನೇಶ್ ಕಾಮತ್ (24) ಎಂದು ಗುರುತಿಸಲಾಗಿದೆ. ಜುಲೈ 2 ರಂದು ಸೆನ್ ಪೊಲೀಸ್ ಠಾಣೆಗೆ ಬಂದ ಮಾಹಿತಿಯ ಮೇರೆಗೆ ಮಂಗಳೂರಿನ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬ ಸ್ಥಳದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿರುವ ವೇಳೆಗೆ ದಾಳಿ ಮಾಡಿ ಪ್ರತಿಯೊಬ್ಬರ ಬಳಿ 1 ಕೆ.ಜಿ ಗಿಂತ ಹೆಚ್ಚಿನ ಪ್ರಮಾಣದ ಗಾಂಜಾವನ್ನು ಹಾಗೂ ಗಾಂಜಾ ಪ್ಯಾಕೇಟ್ ಸೇರಿದಂತೆ ಒಟ್ಟು 5.7 ಕೆ.ಜಿ ತೂಕದ ರೂ 5,20,000/- ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ 06- ಮೊಬೈಲ್ ಫೋನ್, 1- ದ್ವಿಚಕ್ರ ವಾಹನ ವನ್ನು ವಶಪಡಿಸಿಕೊಳ್ಳಲಾಗಿದೆ.

05 ಜನ ಆರೋಪಿತರು ಮಂಗಳೂರು ನಗರದಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುವವರಾಗಿರುತ್ತಾರೆ. ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೇಟ್ ಗಳ್ಲಲಿ ಪ್ಯಾಕ್ ಮಾಡಿ ಪ್ರತಿ ಗಾಂಜಾ ಪ್ಯಾಕೇಟ್ ಗೆ ರೂ 1000 ದಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ತನಿಖೆ ಮುಂದುವರೆದಿದ್ದು, ಈ ಆರೋಪಿತರಿಗೆ ಎಲ್ಲಿಂದ ಗಾಂಜಾ ಪೂರೈಕೆ ಯಾಗುತ್ತಿದೆ ಎಂದು ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತನ್ನ ಮಗ ಡ್ರಗ್ಸ್ ವ್ಯಸನಕ್ಕೀಡಾಗಿದ್ದಾನೆಂದು ಆತನ ಹೆತ್ತವರು ಬಂದು ದೂರಿಕೊಂಡ ಹಿನ್ನೆಲೆಯಲ್ಲಿ ಸಿಇಎನ್ ಕ್ರೈಮ್ ತಂಡದ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 200 ಮಂದಿ ಉದ್ಯೋಗಸ್ಥರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಐವರು ಡ್ರಗ್ಸ್ ಪೆಡ್ಡರ್ ಗಳನ್ನು ಬಂಧಿಸಿದ್ದಾರೆ. ಹೆತ್ತವರ ದೂರಿನಂತೆ ಏನಾಗಿದೆ ಎಂದು ತಿಳಿಯಲು ಸಿಇಎನ್ ವಿಭಾಗದಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ, ಡ್ರಗ್ಸ್ ಪೂರೈಕೆಯ ಜಾಲ ಗೊತ್ತಾಗಿದ್ದು, 5 ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 6 ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಒಬ್ಬರು ಬಂದ ದೂರು ನೀಡಿದ್ದರಿಂದ 200 ಜನಕ್ಕೆ ಡ್ರಗ್ಸ್ ಪೂರೈಸುತ್ತಿದ್ದ ಐವರನ್ನು ಬಂಧಿಸಲಾಗಿದೆ. ಇದೇ ರೀತಿ ಹತ್ತು ಜನ ದೂರು ಕೊಟ್ಟರೆ ಎರಡು ಸಾವಿರ ಮಂದಿಗೆ ಡ್ರಗ್ಸ್ ಪೂರೈಕೆ ಆಗುವುದನ್ನು ತಪ್ಪಿಸಬಹುದು. ನೂರು ಮಂದಿ ಬಂದು ಖಚಿತವಾಗಿ ದೂರು ನೀಡಿದಲ್ಲಿ ಇಡೀ ಮಂಗಳೂರು ನಗರದಲ್ಲಿ ಡ್ರಗ್ಸ್ ಪೂರೈಕೆ ಆಗದಂತೆ ಮಾಡಬಹುದು.
ಹೀಗಾಗಿ ಯಾರೇ ಆದರೂ ಡ್ರಗ್ಸ್ ಬಗ್ಗೆ ಮಾಹಿತಿ ಇದ್ದಲ್ಲಿ ನೇರವಾಗಿ ಬಂದು ಹಂಚಿಕೊಳ್ಳಿ ಯಾರೇ ಡ್ರಗ್ಸ್ ವ್ಯಸನಿಗಳಿದ್ದರೂ ಅವರನ್ನು ಸಂತ್ರಸ್ತರೆಂದು ಪರಿಗಣಿಸುತ್ತೇವೆ. ಅವರಿಗೆ ಡ್ರಗ್ಸ್ ಪೂರೈಸುವವರನ್ನು ಪೆಡ್ಡರ್ ಗಳೆಂದು ಪರಿಗಣಿಸಿ ಕಠಿಣ ಕ್ರಮ ಜರುಗಿಸುತ್ತೇವೆ. ಡ್ರಗ್ಸ್ ಜಾಲ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಪೊಲೀಸ್ ಕಮಿಷನರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.