DAKSHINA KANNADA
ಸಂಪ್ಯ ಪರಿಸರದಲ್ಲಿ ಪಸರಿಸುತ್ತಿದ್ದ ವಿಷಗಾಳಿಗೆ ಕಾರ್ಯಾಚರಣೆ ನಡೆಸಿ ಮುಕ್ತಿ ಕಾಣಿಸಿದ ಅಗ್ನಿಶಾಮಕದಳ..!!

ಪುತ್ತೂರು ಸೆಪ್ಟೆಂಬರ್ 16:ಕಳೆದ ಕೆಲವು ದಿನಗಳಿಂದ ಸಂಪ್ಯ ಪರಿಸರದಲ್ಲಿ ಪಸರಿಸುತ್ತಿದ್ದ ವಿಷಗಾಳಿಗೆ ಪುತ್ತೂರು ಅಗ್ನಿಶಾಮಕ ದಳದ ಅಧಿಕಾರಿಗಳು ಬುಧವಾರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆ ಮೂಲಕ ಮುಕ್ತಿ ನೀಡಿದ್ದಾರೆ. ಖಾಸಗಿ ಸಂಸ್ಥೆಯೊಂದು ಕೆಎಸ್ಆರ್ ಟಿಸಿ ಬಸ್ ತ್ಯಾಜ್ಯ ರಾಶಿಗೆ ಹಾಕಿದ ಬೆಂಕಿಯಿಂದಾಗಿ ಈ ವಿಷಕಾರಿ ಹೊಗೆ ಸಂಪ್ಯ ಪರಿಸರದಲ್ಲಿ ಹರಡಿತ್ತು.
ಬೆಂಗಳೂರು ಮೂಲದ ಸಂಸ್ಥೆಯೊಂದು ಕೆಎಸ್ಆರ್ ಟಿಸಿಯ ನಿರುಪಯೋಗಿ ಬಸ್ ಗಳ ಗುಜರಿ ಮಾಡಲು ಟೆಂಡರ್ ಪಡೆದಿತ್ತು. ಅದರಂತೆ ನಿರುಪಯೋಗಿ(ಗುಜುರಿ) ಬಸ್ ಗಳನ್ನು ಪ್ರತ್ಯೇಕವಾಗಿ ವಿಂಗಡಿಸುವ ಕಾರ್ಯ ನಡೆಸುತ್ತಿತ್ತು. ಇದರಂತೆ ಪ್ರತ್ಯೇಕಿಸಲ್ಪಟ್ಟ ಪ್ಲಾಸ್ಟಿಕ್, ರಬ್ಬರ್ , ಟಯರ್ ನ ತ್ಯಾಜ್ಯಗಳಿಗೆ ರಾತ್ರಿಹೊತ್ತು ಬೆಂಕಿ ಹಾಕುವ ಮೂಲಕ ಪರಿಸರದಲ್ಲಿ ವಿಷಗಾಳಿ ಹರಡುವ ಕಾರ್ಯ ನಡೆಸುತ್ತಿತ್ತು. ತಡರಾತ್ರಿ ಬೆಂಕಿ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಬಹುತೇಕರ ಗಮನಕ್ಕೆ ಬಂದಿರಲಿಲ್ಲ.

ಬುಧವಾರ ರಾತ್ರಿಯೂ ಮೈದಾನ ಎರಡು ಕಡೆಗಳಲ್ಲಿ ತ್ಯಾಜ್ಯ ರಾಶಿಗೆ ಬೆಂಕಿ ಹಾಕಲಾಗಿದ್ದು, ಪರಿಸರದಲ್ಲಿ ಕಪ್ಪು ಹೊಗೆ ಆವರಿಸಿತ್ತು. ಈ ಕುರಿತಾಗಿ ಸ್ಥಳೀಯರು ರಾತ್ರಿ 11.30 ರ ಸುಮಾರಿಗೆ ಪುತ್ತೂರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ. ಇದೇ ಸಂದರ್ಭ ಸ್ಥಳೀಯರು ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ವಿಷಗಾಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರಲ್ಲದೆ, ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ಮುಂದಾಗುವ ತೀರ್ಮಾನ ಕೈಗೊಳ್ಳುತ್ತಿದ್ದಂತೆಯೇ, ಸಿಬ್ಬಂದಿ ಸಯ್ಯದ್ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದು ಮುಂದೆ ಇಂತಹಾ ಘಟನೆಗಳು ಮರುಕಳಿಸದಂತೆ ಗಮನಹರಿಸುವುದಾಗಿ ತಿಳಿಸಿದರು.