KARNATAKA
ಪ್ರಧಾನಿ ಮೋದಿ ರೋಡ್ ಶೋ; ಕೇಸರಿಮಯವಾದ ಸಕ್ಕರೆ ನಾಡು ಮಂಡ್ಯ
ಮಂಡ್ಯ, ಮಾರ್ಚ್ 12: ಮಂಡ್ಯದ ಪ್ರವಾಸಿಮಂದಿರ ಸರ್ಕಲ್ನಿಂದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭಿಸಿದ್ದಾರೆ. ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‌ವರೆಗೆ ರೋಡ್ ಶೋ ನಡೆದಿದೆ.
ರಸ್ತೆಯ ಎರಡೂ ಬದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಅಭಿಮಾನಿಗಳು ಪ್ರಧಾನಿ ಮೇಲೆ ಪುಷ್ಪಾರ್ಚನೆ ಮಾಡಿದ್ದಾರೆ. ಇದೇ ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದ್ದಾರೆ.
ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ಮೋದಿ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದು, ಐತಿಹಾಸಿಕ ರೋಡ್ ಶೋ ಮೂಲಕ ಮಂಡ್ಯ ನಗರ ಕೇಸರಿಮಯವಾಗಿ ಬದಲಾಗಿದೆ. ಮಂಡ್ಯದ ಎಲ್ಲಾ ರಸ್ತೆಗಳಲ್ಲೂ ಬಿಜೆಪಿ ಬಾವುಟ, ಬ್ಯಾನರ್ ಹಾಗೂ ಬಂಟಿಂಗ್ಸ್ ರಾರಾಜಿಸಿದೆ. ರೋಡ್ ಶೋಗಾಗಿ ಹೆದ್ದಾರಿ ಬದಿಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು.
ರೋಡ್ ಶೋ ವೇಳೆ ಕಾರ್ಯಕರ್ತರು ಮೋದಿ…ಮೋದಿ…ಮೋದಿ ಎಂದು ಜೈಕಾರ ಕೂಗಿದ್ದಾರೆ. ಮೋದಿ ಆಗಮನದಿಂದ ಹಳೇ ಮೈಸೂರು ಭಾಗದ ಬಿಜೆಪಿಯಲ್ಲಿ ಮತ್ತಷ್ಟು ಹುಮ್ಮಸ್ಸು ಬಂದಿದೆ. ವಿಧಾನಸಭಾ ಚುನಾವಣೆ ಮೇಲೆ ಮೋದಿ ಭೇಟಿ ಪ್ರಭಾವದ ಲೆಕ್ಕಾಚಾರ ಶುರುವಾಗಿದೆ. ಮಂಡ್ಯದಲ್ಲಿ ಬಿಜೆಪಿ ಶಕ್ತಿ ವೃದ್ಧಿಸಿಗೊಳ್ಳಲು ಕಮಲ ಪಾಳಯ ಪ್ಲಾನ್ ಮಾಡಿದೆ.
ಮೋದಿ ರೋಡ್ ಶೋನಲ್ಲೂ ಹಿಂದುತ್ವ ಹಾಗೂ ಒಕ್ಕಲಿಗ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ. ಪ್ರಧಾನಿ ಸಂಚರಿಸಲಿರುವ ಮಾರ್ಗದ ನಾಲ್ಕು ವೃತ್ತಗಳಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ಮೈಷುಗರ್ ಫ್ಯಾಕ್ಟರಿ ವೃತ್ತದ ದ್ವಾರಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ನಿರ್ಮಿಸಲಾಗಿದೆ.