LATEST NEWS
ದೇಶದಲ್ಲಿ ಲಾಕ್ ಡೌನ್ ಇಲ್ಲ ..ಆದರೆ ನೈಟ್ ಕರ್ಪ್ಯೂಗೆ ಆದ್ಯತೆ – ಪ್ರಧಾನಿ ಮೋದಿ

ನವದೆಹಲಿ ಎಪ್ರಿಲ್ 8: ದೇಶದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆ ಇಂದು ದೇಶದ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ರಾತ್ರಿ ಕರ್ಪ್ಯೂ ಬಗ್ಗೆ ಒಲವು ತೋರಿದ್ದಾರೆ.
ಕೊರೊನಾ ಮೊದಲ ಅಲೆ ಸಂದರ್ಭ ಜನರಲ್ಲಿದ್ದ ಭಯ ಈಗ ಕಡಿಮೆಯಾಗಿದ್ದು, ಜನರು ಕಾಳಜಿ ವಹಿಸುವುದು ಕಡಿಮೆ ಮಾಡುತ್ತಿದ್ದಾರೆ. ಆದ್ದರಿಂದ ನಾನು ಎಲ್ಲ ಮುಖ್ಯಮಂತ್ರಿಗಳನ್ನೂ ವಿನಂತಿಸುತ್ತೇನೆ. ನೀವು ನಿಮ್ಮ ರಾಜ್ಯಗಳಲ್ಲಿ ಸಮೀಕ್ಷೆ ಮಾಡಿಸಿ. ಕೊರೊನಾದ ಆರಂಭದ ದಿನಗಳಲ್ಲಿ ತುಸು ಲಕ್ಷಣವಿದ್ದರೂ ಜನರು ಹೆದರಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಅಸಿಂಪ್ಟಮೆಟಿಕ್ ಜಾಸ್ತಿಯಿದ್ದಾರೆ. ಜನರಲ್ಲಿಯೂ ಮೊದಲಿನಂತೆ ಭಯವಿಲ್ಲ. ಟೆಸ್ಟ್, ಟ್ರ್ಯಾಕ್, ಟ್ರೀಟ್, ಕೋವಿಡ್ ಮ್ಯಾನೇಜ್ಮೆಂಟ್ ಕಡೆಗೆ ನಾವು ಹೆಚ್ಚು ಗಮನ ಕೊಡೋಣ.

ನಾವು ಈಗ ಮೈಕ್ರೊ ಕಂಟೇನ್ಮೆಂಟ್ಗಳನ್ನು ಮಾಡಬೇಕು. ಅಲ್ಲಿಗೆ ಹೆಚ್ಚು ಗಮನಕೊಡಬೇಕು. ರಾತ್ರಿ ಕರ್ಫ್ಯೂ ಎಂಬ ಹೆಸರನ್ನು ಕೊರೊನಾ ಕರ್ಫ್ಯೂ ಎಂದು ಕರೆಯೋಣ. ಕೆಲವರು ಕೊರೊನಾ ರಾತ್ರಿ ಮಾತ್ರ ಬರುತ್ತಾ ಅಂತ ವ್ಯಂಗ್ಯವಾಡುತ್ತಾರೆ. ನಾನು ಏನೂ ಹೇಳುವುದಿಲ್ಲ. ಕೊರೊನಾ ಕರ್ಫ್ಯೂ ಎಂದು ಕರೆದಾಗ ಜನರಿಗೆ ಹೆಚ್ಚು ಜಾಗೃತಿ ಮೂಡಿಸಲು ಸಾಧ್ಯವಾಗುತ್ತೆ. ಅಂಥ ಸಂದರ್ಭದಲ್ಲಿ ಜನರಿಗೆ ಪದೇಪದೆ ನಾವು ಏಕೆ ಕರ್ಫ್ಯೂ ಸ್ಥಿತಿ ಎದುರಿಸಬೇಕಾಯಿತು ಎಂಬ ಮನವರಿಕೆ ಆಗುತ್ತೆ ಎಂದರು.