LATEST NEWS
ಸಂಭ್ರಮವಿಲ್ಲದೆ ನಡೆದ ಪೆರ್ಡೂರು ಮದುಮಕ್ಕಳ ಜಾತ್ರೆ
ಉಡುಪಿ ಅಗಸ್ಟ್ 17: ಕರಾವಳಿಯಲ್ಲಿ ನಡೆಯುವ ಶ್ರಾವಣದ ಮೊದಲ ಜಾತ್ರೆ ಅನಂತಪದ್ಮನಾಭ ಕ್ಷೇತ್ರದ ಮದುಮಕ್ಕಳ ಹಬ್ಬ ಅತ್ಯಂತ ಸರಳವಾಗಿ ನಡೆಯಿತು.
ಸಿಂಹ ಸಂಕ್ರಮಣದ ದಿನ ಈ ಜಾತ್ರೆ ಅದ್ದೂರಿಯಾಗಿ ನಡೆಯುವುದು ಸಂಪ್ರದಾಯ. ಆಷಾಡ ತಿಂಗಳು ಕಳೆದು ಶ್ರಾವಣ ಮಾಸದ ಮೊದಲ ದಿನ, ಹೊಸದಾಗಿ ಮದುವೆಯಾದ ನವವಧು ಪತಿಯ ಜೊತೆಗೆ ಪೆರ್ಡೂರು ದೇವಸ್ಥಾನಕ್ಕೆ ಬರುವುದು ಸಂಪ್ರದಾಯ. ತವರುಮನೆಯಿಂದ ಪತಿಯ ಮನೆಗೆ ಹೋಗುವ ಮುನ್ನ ಈ ಕ್ಷೇತ್ರಕ್ಕೆ ಬಂದರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎನ್ನುವುದು ನಂಬಿಕೆ.
ಈ ಹಿನ್ನೆಲೆಯಲ್ಲಿ ನಡೆಯುವ ಮದುಮಕ್ಕಳ ಜಾತ್ರೆ ಈ ಬಾರಿ ಕಳಾಹೀನವಾಗಿತ್ತು. ಸಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿತ್ತು. ದೇವರ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಪ್ರದಕ್ಷಿಣೆ ತಂದು ಸಾಂಪ್ರದಾಯಿಕ ಪೂಜೆ ನಡೆಸಲಾಯಿತು. ದೇವಸ್ಥಾನದ ಸಿಬ್ಬಂದಿಗಳು ಮತ್ತು ಬೆರಳೆಣಿಕೆಯ ಭಕ್ತರು ಮಾತ್ರ ಪೆರಡೂರು ಜಾತ್ರೆಯ ವೇಳೆ ಹಾಜರಿದ್ದರು. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಅನಂತಪದ್ಮನಾಭ ದೇವರ ದರ್ಶನ ಪಡೆದರು.