KARNATAKA
ವಿಲ್ಹಿಂಗ್ ಮಾಡುವವರಿಗೆ ಒಳ್ಳೆ ಬುದ್ದಿ ಕಲಿಸಿದ ಜನ….!!
ಬೆಂಗಳೂರು ಅಗಸ್ಟ್ 18: ಜನ ನಿಬಿಡ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಇಬ್ಬರ ಸ್ಕೂಟರ್ ಗಳನ್ನು ಜನರು ಪ್ಲೈಓವರ್ ನಿಂದ ಕೆಳಗೆ ಬಿಸಾಡಿದ ಘಟನೆ ಗುರುವಾರ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಸವಾರರು ಸೇರಿದಂತೆ ಇಬ್ಬರು ಯುವಕರು ತಮ್ಮ ಸ್ಕೂಟರ್‌ಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು.
ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಒಂದು ಸ್ಕೂಟರ್ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಸಿಟ್ಟಿಗೆದ್ದ ವಾಹನ ಸವಾರರು ಆತನ ಮತ್ತು ಮತ್ತೊಬ್ಬ ಯುವಕನ ಸ್ಕೂಟರ್ಅನ್ನು ಫ್ಲೈಓವರ್ ನಿಂದ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಯುವಕರು ಮತ್ತು ಹಿಂಬದಿ ಸವಾರರು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಅಲ್ಲಿ ನೆರೆದಿದ್ದ ವ್ಯಕ್ತಿಯೊಬ್ಬ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅದು ಶನಿವಾರ ವೈರಲ್ ಆಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ದ್ವಿಚಕ್ರ ವಾಹನದ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.
ಮತ್ತೊಂದೆಡೆ, ಗುರುವಾರ ಬೆಂಗಳೂರು ಈಶಾನ್ಯ ಸಂಚಾರ ಪೊಲೀಸರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೈಕ್ ವ್ಹೀಲಿಂಗ್ ನಡೆಸಿ ಪುಂಡಾಟ ಮೆರೆದಿದ್ದ 44 ಯುವಕರನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದಿದ್ದರು. ಬೈಕ್ ವ್ಹೀಲಿಂಗ್ ಸಂಬಂಧ 33 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.