LATEST NEWS
ಹಂಸಲೇಖ ಬಾಯಿಂದ ಇಂತ ಮಾತು ಬರಬಾರದಿತ್ತು… ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ

ಉಡುಪಿ: ದಲಿತರ ಮನೆಗೆ ಪೇಜಾವರ ಶ್ರೀಗಳು ತೆರಳಿದ್ದನ್ನು ಟೀಕಿಸಿರುವ ಹಂಸಲೇಖ ಹೇಳಿಕೆಗೆ ವಿಶ್ವಪ್ರಸನ್ನ ತೀರ್ಥಶ್ರೀ ಅವರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದು,ಹಂಸಲೇಖ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು. ಸಮಾಜ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ. ಪ್ರಚಾರಕ್ಕಾಗಿ ಸಾಕಷ್ಟು ಜನರು ಹೀಗೆ ಮಾಡುತ್ತಾರೆ ಎಂದು ಹೇಳಿದರು.
ಪದ್ಮವಿಭೂಷಣ ಪ್ರಶಸ್ತಿ ಬಂದಿರುವ ಗುರುಗಳಿಗೆ ಹಾಗಾಗಿ ಹಂಸಲೇಖ ಅವರು ಪೇಜಾವರ ವಿಶ್ವೇಶ ತೀರ್ಥರನ್ನೇ ಅವಮಾನಿಸಿದ್ದಾರೆ ಎಂದ ಅವರು ನನ್ನ ಗುರುಗಳು ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ (Pejavara Sri Vishvesha Tirtha) ಹೋಗುತ್ತಿದ್ದರು. ನೆರೆ ಹಾವಳಿ, ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರ ವಿಶ್ವೇಶತೀರ್ಥರು ಬಯಸಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ ಎಂದು ವಿಶ್ವಪ್ರಸನ್ನ ತೀರ್ಥಶ್ರೀ ಹೇಳಿದ್ದಾರೆ.

ಶ್ರೀಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲ ವಿರೋಧಿಸಿದ್ದ. ಆ ಕೃಷ್ಣನೇ ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸವನ್ನು ಮಾಡಿದ್ದಲ್ಲ. ನಾವು ದಲಿತರ ಜೊತೆಗಿದ್ದೇವೆ, ದಲಿತರು ನಮ್ಮಿಂದ ಹೊರತಲ್ಲ. ಐಕ್ಯ ಸಂದೇಶ ನೀಡುವ ಸಲುವಾಗಿ ನಮ್ಮ ಕಾರ್ಯಕ್ರಮಗಳು ನಡೆಯುತ್ತವೆ. ನಮ್ಮ ಗುರುಗಳ ಮೇಲೆ ಅಭಿಮಾನದಿಂದ ಯಾರಾದರೂ ಧರಣಿ ಮಾಡಿದರೆ, ಅದು ಪ್ರತಿಭಟನೆ ಮಾಡುವವರ ವೈಯಕ್ತಿಕ ವಿಚಾರವಾಗಿರುತ್ತೆ. ನಾವಂತೂ ಯಾವುದೇ ರೀತಿಯ ಪ್ರತಿಭಟನೆ ಮಾಡುವುದಿಲ್ಲ ಎಂದು ವಿಶ್ವಪ್ರಸನ್ನ ತೀರ್ಥಶ್ರೀ ಹೇಳಿದ್ದಾರೆ.