LATEST NEWS
ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೆತರಿಕೆ ಇದೆ – ಸಿಎಂ ಯಡಿಯೂರಪ್ಪ

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೆತರಿಕೆ ಇದೆ – ಸಿಎಂ ಯಡಿಯೂರಪ್ಪ
ಉಡುಪಿ ಡಿಸೆಂಬರ್ 21: ಉಸಿರಾಟದ ತೊಂದರೆಯಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಣಿಪಾಲಕ್ಕೆ ಭೇಟಿ ನೀಡಿ ವಿಚಾರಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೇಜಾವರಶ್ರೀ ಗುಣಮುಖರಾಗಲು ಪ್ರಾರ್ಥಿಸಬೇಕು. ನಿನ್ನೆಗಿಂತ ಶ್ರೀಗಳ ಆರೋಗ್ಯದಲ್ಲಿ ಇಂದು ಸುಧಾರಿಸಿದ್ದು, ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಿ ಬಂದು ಪೂಜೆ ಮಾಡಲಿ ಎಂದು ಹೇಳಿದರು. ಶ್ರೀಗಳ ಗುಣಮುಖರಾಗಲು ತಜ್ಞ ವೈದ್ಯರು ಪ್ರಯತ್ನ ಮಾಡುತ್ತಿದ್ದು, ಸದ್ಯ ಶ್ರೀಗಳು ಕಣ್ಣು ಬಿಡುತ್ತಿದ್ದಾರೆ. ಸೋಂಕು ಆಗಬಾರದೆಂದು ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ನಂತರ ಪೇಜಾವರ ಶ್ರೀಗಳ ಜೊತೆಗಿನ ಓಡನಾಟವನ್ನು ನೆನಪಿಸಿ ಸಿಎಂ ಯಡಿಯೂರಪ್ಪ ರಾಮಮಂದಿರ ಹೋರಾಟದ ಸಂದರ್ಭ ಸ್ವಾಮೀಜಿ ಜೊತೆ ಅಂದು 16 ಜನ ಇದ್ದೆವು 16 ಜನರ ಪೈಕಿ ನಾನು ಒಬ್ಬನಾಗಿದ್ದೆ ಎಂದರು. ಇದು ರಾಮಮಂದಿರ ಕಟ್ಟುವ ಸುಸಂದರ್ಭ ಬಂದಿದ್ದು, ಮಂದಿರ ನಿರ್ಮಾಣವಾಗುವವರೆಗೆ ಅವರು ಬದುಕಿರಬೇಕು ಎಂದರು.
ಸ್ವತಂತ್ರ್ಯ ಭಾರತದಲ್ಲಿ ಇವರಷ್ಟು ಓಡಾಟ ಮತ್ತೊಬ್ಬರು ಇರುವುದು ಸಾದ್ಯವಿಲ್ಲ ಎಂದ ಅವರು ಸ್ವಾಮಿಜಿಗಳಿಗೆ ಓಡಾಟ ಕಡಿಮೆ ಮಾಡಲು ನೂರಾರು ಬಾರಿ ಹೇಳಿದ್ದೆ ಎಂದು ನೆನಪಿಸಿಕೊಂಡರು. ಸ್ವಾಮೀಜಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು, ಈಗಿರುವ ಆರೋಗ್ಯ ಸಮಸ್ಯೆಯನ್ನು ದಾಟ ಬರಲಿ. ವೈದ್ಯರು ಎರಡು ದಿನಗಳಲ್ಲಿ ಆರೋಗ್ಯ ಸುಧಾರಣೆ ಆಗಿದೆ ಎಂದಿದ್ದಾರೆ ಎಂದರು.