ಉಡುಪಿ ಅಗಸ್ಟ್ 20: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹರ್ನಿಯಾ ಆಪರೇಶನ್ ಸಫಲವಾಗಿದೆ ಉಡುಪಿ ಶ್ರೀಕೃಷ್ಣ ಮಠದಿಂದ ಹತ್ತು ಗಂಟೆ ಸುಮಾರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಪೇಜಾವರ ಸ್ವಾಮೀಜಿ ತೆರಳಿದ್ದರು. ಕೆಎಂಸಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು ಬಿಪಿ ಶುಗರ್ ಮತ್ತಿತರ ಎಲ್ಲಾ ಚೆಕಪ್ ಗಳನ್ನು ಮಾಡಿದ ನಂತರ ಪೇಜಾವರ ಸ್ವಾಮೀಜಿ ಅವರನ್ನು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರು.

ಆಪರೇಷನ್ ನಡೆಯುತ್ತಿದ್ದ ವೇಳೆ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ನಡೆದರೆ- ಮುಸ್ಲೀಂ ಧರ್ಮೀಯರಿಂದ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರ ಹರ್ನಿಯಾ ಆಪರೇಷನ್ ಸಕ್ಸಸ್ ಆಗಿದೆ. ಸುಮಾರು ಒಂದು ಗಂಟೆಗಳ ಕಾಲ ಹಿರಿಯ ವೈದ್ಯ ಪದ್ಮರಾಜ್ ನೇತೃತ್ವದ ತಂಡ ಸ್ವಾಮೀಜಿಯವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿತು.

ಸೊಂಟದಿಂದ ಕೆಳಭಾಗಕ್ಕೆ ಅನಸ್ತೇಷಿಯಾ ನೀಡಿ ಆಪರೇಷನ್ ಮಾಡಲಾಯಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ. ಆಪರೇಷನ್ ಕೊಠಡಿಯ ಪಕ್ಕದ ಸ್ಪೆಷಲ್ ರೂಂನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿರುವ ಪೇಜಾವರ ಸ್ವಾಮೀಜಿಗಳು, ತನ್ನ ಶಿಷ್ಯ ವೃಂದ ಜೊತೆ ಎಂದಿನಂತೆ ಮಾತನಾಡುತ್ತಿದ್ದಾರೆ. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪೇಜಾವರ ಸ್ವಾಮೀಜಿ ಅವರು ನಾಳೆ ಸಂಜೆಯ ವೇಳೆಗೆ ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿಯಿದೆ.

ಕಳೆದ ಒಂದು ತಿಂಗಳಿಂದ ಪೇಜಾವರ ಸ್ವಾಮೀಜಿ ಅವರಿಗೆ ಹರ್ನಿಯಾ ನೋವು ಕಾಣಿಸಿಕೊಳ್ಳುತ್ತಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ಒಳಪಡಿಸಬೇಕು ಎಂದು ಒತ್ತಡ ಹಾಕಿದ ನಂತರ ಸ್ವಾಮೀಜಿಯವರು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಣಿಪಾಲ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಪೇಜಾವರ ಶ್ರೀಗಳ ಆರೋಗ್ಯಕ್ಕಾಗಿ ವಿಶೇಷ ಪೂಜೆ

ಇದಕ್ಕೂ ಮುನ್ನ ಪೇಜಾವರ ಸ್ವಾಮೀಜಿ ಅವರ ಶಿಷ್ಯ ವೃಂದ, ಹಿರಿಯ ಅರ್ಚಕರ ತಂಡ ಕೃಷ್ಣಮಠದ ರಾಜಾಂಗಣದಲ್ಲಿ ಧನ್ವಂತರಿ ಹೋಮ ಮತ್ತು ನರಸಿಂಹ ಮಂತ್ರ ಜಪವನ್ನು ನೆರವೇರಿಸಲಾಯಿತು. ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ಪೇಜಾವರ ಸ್ವಾಮೀಜಿ ಅವರು ಪೂರ್ಣಾಹುತಿ ಕಾರ್ಯದಲ್ಲಿ ಪಾಲ್ಗೊಂಡರು. ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳಾರತಿಯನ್ನು ಈ ಸಂದರ್ಭದಲ್ಲಿ ನೆರವೇರಿಸಿದ್ದರು. ಪೇಜಾವರ ಸ್ವಾಮೀಜಿ ಅವರ ಮುಸ್ಲೀಂ ಧರ್ಮೀಯ ಅಭಿಮಾನಿಗಳ ತಂಡ, ಪೇಜಾವರ ಬ್ಲಡ್ ಡೊನೇಷನ್ ಟೀಮ್, ಕೆಎಂಸಿ ಆಸ್ಪತ್ರೆಯ ಹೊರಭಾಗದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು.

ಇದೇ ಸಂದರ್ಭ ಕರಂಬಳ್ಳಿ ದೇವಸ್ಥಾನದಲ್ಲಿ ಪೇಜಾವರ ಸ್ವಾಮೀಜಿ ಅಭಿಮಾನಿಗಳು ನಂದಾದೀಪ ಪೂಜೆ, ವಿಷ್ಣುಸಹಸ್ರನಾಮ ಮತ್ತಿತರ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿತು.  ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪೇಜಾವರ ಮಠದಲ್ಲಿ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು, ಧರ್ಮಸಂಸತ್ತು ಇರುವುದರಿಂದ ಅದಕ್ಕೆ ಮುಂಚಿತವಾಗಿ ಪೇಜಾವರ ಸ್ವಾಮೀಜಿ ಅವರು ತನ್ನನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿಕೊಂಡರು.

ಪೇಜಾವರ ಸ್ವಾಮೀಜಿ ಅವರು ಇನ್ನೆರಡು ದಿನಗಳಲ್ಲಿ ಕೆಎಂಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಹರ್ನಿಯ ಆಪರೇಷನ್ ಗೆ ಸುಮಾರು ಒಂದು ವಾರದಿಂದ ಹತ್ತು ದಿನಗಳ ಕಾಲ ವಿಶ್ರಾಂತಿ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ವಿಶ್ರಾಂತಿಯನ್ನು ಮಠದಲ್ಲಿ ಪಡೆದುಕೊಳ್ಳುವುದಾಗಿ ಪೇಜಾವರ ಸ್ವಾಮೀಜಿ ಈ ಹಿಂದೆ  ತಿಳಿಸಿದ್ದರು.

ಕೃಷ್ಣ ಮಠದ ಪೂಜೆ

ಪೇಜಾವರ ಸ್ವಾಮೀಜಿ ಅವರು ವಿಶ್ರಾಂತಿಯಲ್ಲಿರುವಾಗ ಕಿರಿಯ ಶ್ರೀಪಾದರು ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ನೆರವೇರಿಸುತ್ತಿದ್ದಾರೆ. ಒಟ್ಟಿನಲ್ಲಿ ಹಿರಿಯ ಪೇಜಾವರ ಶ್ರೀಗಳು ಶೀಘ್ರ ಗುಣಮುಖವಾಗಿ ಬರಲಿ ಮತ್ತೆ ತನ್ನ ದೈನಂದಿನ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲಿ ಎಂದು ಲಕ್ಷಾಂತರ ಮಂದಿ ಹಾರೈಸುತ್ತಿದ್ದಾರೆ.

ಕೃಷ್ಣ ಮಠದ ಸಂಪ್ರದಾಯ

ಶ್ರೀಕೃಷ್ಣ ಮಠದ ಸಂಪ್ರದಾಯದಂತೆ ಪರ್ಯಾಯ ಪೀಠವೇರಿದ ಸ್ವಾಮಿಜಿಗಳು 2 ವರ್ಷಗಳ ಕಾಲ ಮಠದಿಂದ ಹೊರಗೆ ಹೋಗಲು ನಿರ್ಭಂಧವಿದೆ. ಈ ಹಿನ್ನಲೆಯಲ್ಲಿ ಸುಮಾರು 1 ವರ್ಷಗಳ ಕಾಲದಿಂದ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಪೇಜಾವರ ಶ್ರೀಗಳು ಮುಂದೂಡುತ್ತಾ ಬಂದಿದ್ದರು. ಆದರೆ ಇತ್ತೀಚೆಗೆ ನೋವು ಜಾಸ್ತಿಯಾದ ಕಾರಣ, ಅಷ್ಟಮಠದ ಎಲ್ಲಾ ಸ್ವಾಮಿಜಿಗಳು ಸಮಾಲೋಚನೆ ನಡೆಸಿ, ಒತ್ತಡ ಹೇರಿದ ಹಿನ್ನಲೆಯಲ್ಲಿ ಪೇಜಾವರ ಶ್ರೀಗಳು ಈ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆಯನ್ನು ಸೂಚಿಸಿದ್ದರು.