DAKSHINA KANNADA
ಬಡ ಮೀನುಗಾರರ ವಿರುದ್ದ ಪಂಚಾಯತ್ ಪಿಡಿಓ ದರ್ಪ….!!
ಪಿಡಿಓ ಕಾರು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು
ಮಂಗಳೂರು ಜೂನ್ 4: ಗೂಡ್ಸ್ ಟೆಂಪೋದಲ್ಲಿ ಮೀನು ಮಾರಾಟ ಮಾಡುತ್ತಿದ್ದ ವೇಳೆ, ಪಂಚಾಯತ್ ಪಿಡಿಓ ಅಧಿಕಾರಿಯೊಬ್ಬ ಅಡ್ಡಿಪಡಿಸಿ ದರ್ಪ ತೋರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಅಶೋಕ್ ಶೆಟ್ಟಿ ಎಂಬ ವ್ಯಕ್ತಿ ಗೂಡ್ಸ್ ಟೆಂಪೋದಲ್ಲಿ ಮೀನು ಮಾರಾಟ ಮಾಡುತ್ತಿದ್ದ ವೇಳೆ ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ರೋಡ್ರಿಗಸ್ ತನ್ನ ಐಷಾರಾಮಿ ಜೀಪ್ ಕಾರಿನಲ್ಲಿ ಸ್ಥಳಕ್ಕಾಗಮಿಸಿ ಮೀನು ವ್ಯಾಪಾರಕ್ಕೆ ಅಡ್ಡಿಪಡಿಸಿದ್ದಲ್ಲದೆ ಟೆಂಪೋ ಕೀ ತೆಗೆದು ದರ್ಪ ತೋರಿದ್ದಾರೆಂದು ಆರೋಪ ಕೇಳಿಬಂದಿದೆ.
ಇಷ್ಟಾಗುತ್ತಿದ್ದಂತೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು ಪಿಡಿಓ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪ್ಪಿನಂಗಡಿ ಬಳಿಯ ಗಾಂಧಿ ಪಾರ್ಕ್ ನಲ್ಲಿ ಘಟನೆ ನಡೆದಿದ್ದು ಪಂಚಾಯತ್ ಅಧಿಕಾರಿ ಇನ್ಯಾರದೋ ಕುಮ್ಮಕ್ಕಿನಿಂದ ಈ ಕೃತ್ಯ ನಡೆಸಿದ್ದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉಪ್ಪಿನಂಗಡಿ ಪಂಚಾಯತ್ ಪಿಡಿಓ ಆಗಿ ಬಂದಿದ್ದ ರೋಡ್ರಿಗಸ್ ಸಾರ್ವಜನಿಕರ ಮಧ್ಯೆ ಅಧಿಕಾರದ ದರ್ಪ ತೋರುತ್ತಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನು ಮಾರಾಟ ನಡೆಸುವುದು ಕಾನೂನಿಗೆ ವಿರುದ್ಧವಾದ್ರೆ ಪೊಲೀಸರಿಗೆ ದೂರು ಕೊಡಲಿ, ಟೆಂಪೋ ಕೀ ತೆಗೆದು ದರ್ಪ ತೋರಿದ್ದು ಎಷ್ಟು ಸರಿ ಎಂದು ಜನರು ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದಾರೆ. ಬಳಿಕ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ಚದುರಿಸಿದ್ದಾರೆ.