KARNATAKA
ಮದುವೆ ಕಾರ್ಯಕ್ರಮಕ್ಕೆ ಪಾಸ್ ಕಡ್ಡಾಯ : ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲು
ಬೆಂಗಳೂರು, ಎಪ್ರಿಲ್ 18 : ಮದುವೆ ಕಾರ್ಯಕ್ರಮದಲ್ಲಿ ಇನ್ನು 100 ಮಂದಿಗೆ ಮಾತ್ರ ಅವಕಾಶ. ಭಾಗವಹಿಸಲು ಪಾಸ್ ಕಡ್ಡಾಯ. ಇದಕ್ಕಿಂತ ಹೆಚ್ಚು ಜನ ಸೇರಿದರೆ ಎಫ್‌ಐಆರ್ ದಾಖಲು. ಜಾತ್ರೆ ಮತ್ತಿತರ ಕಾರ್ಯಕ್ರಮಗಳು ನಡೆದರೆ ಆಯಾ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರೇ ಹೊಣೆ ….ಇವು ರಾಜ್ಯ ಸರಕಾರ ಶನಿವಾರ ಪ್ರಕಟಿಸಿದ ಹೊಸ ಪ್ರತಿಬಂಧಕಾತ್ಮಕ ನಿರ್ಧಾರಗಳು.
ವಿವಿಧ ಡಿ.ಸಿ.ಗಳು, ಎಸ್.ಪಿ.ಗಳ ಜತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ| ಸುಧಾಕರ್ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಇವು ಚರ್ಚೆಯಾಗಿವೆ. ನಿರ್ಬಂಧ ಮೀರಿ ಜಾತ್ರೆ ನಡೆದರೆ ಡಿ.ಸಿ.,ಎಸ್.ಪಿ.ಗಳನ್ನೇ ಹೊಣೆ ಮಾಡುವ ಎಚ್ಚರಿಕೆ ನೀಡಲಾಗಿದೆ.
ಜಾತ್ರೆ ನಡೆಯದಂತೆ ಮೊದಲೇ ಕ್ರಮ ಕೈಗೊಳ್ಳಬೇಕೇ ವಿನಾ ಜನ ಸಮೂಹದ ಮೇಲೆ ಲಾಠಿ ಪ್ರಹಾರ ನಡೆಸದಂತೆ ಸೂಚಿಸಲಾಗಿದೆ. ಹೆಚ್ಚುವರಿಯಾಗಿ ಶೇ. 50 ಹಾಸಿಗೆ ಹೊಂದಿಸುವಂತೆಯೂ ನಿರ್ದೇಶನ ನೀಡಲಾಗಿದೆ. ಎ. 20ರ ಬಳಿಕದ ಕ್ರಮಗಳ ಬಗ್ಗೆ ಸಿಎಂ ಜತೆಗೆ ಚರ್ಚಿಸಿದ ಮೇಲೆ ನಿರ್ಧಾರ ಹೊರಬೀಳಲಿದೆ ಎಂದು ವೀಡಿಯೋ ಸಂವಾದದ ಬಳಿಕ ಸಚಿವ ಅಶೋಕ್ ಹೇಳಿದರು.
ಹೊಸ ನಿಯಮಗಳು ಏನು?
1. ಹೊಸದಾಗಿ ನಿಗದಿಯಾಗುವ ಮದುವೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯ
2. ಮಿತಿಗಿಂತ ಹೆಚ್ಚು ಜನ ಸೇರಿದರೆ ಕಲ್ಯಾಣ ಮಂಟಪಕ್ಕೆ ಬೀಗ
3. ಮದುವೆ ಆಯೋಜಿಸಿದವರ ವಿರುದ್ಧ ಎಫ್‌ಐಆರ್
4. ತಹಶೀಲ್ದಾರ್ ಪಾಸ್ ವಿತರಿಸಿ ಸಂಬಂಧ ಪಟ್ಟ ಠಾಣೆಗೆ ಮಾಹಿತಿ ನೀಡಬೇಕು
5. ಒಳಾಂಗಣ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಜನ ಮಿತಿ 100
6. ಹೊರಾಂಗಣ ಕಾರ್ಯಕ್ರಮಗಳಿಗೆ ಜನಮಿತಿ 200
7. ಜಾತ್ರೆ ನಡೆದರೆ ಜಿಲ್ಲಾಧಿಕಾರಿ, ಎಸ್.ಪಿ.ಗಳೇ ಹೊಣೆ
ಕೊರೊನಾ ನಿಯಂತ್ರಣಕ್ಕಾಗಿ ಕಠಿನ ನಿಲುವು ತೆಗೆದು ಕೊಳ್ಳಲಾಗುತ್ತಿದ್ದು, ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಯಾವುದೇ ಜಾತ್ರೆಗೆ ಅವಕಾಶವಿಲ್ಲ. ದೊಡ್ಡ ಜಾತ್ರೆಯಾದರೆ ಡಿ.ಸಿ., ಎಸ್.ಪಿ., ಸಣ್ಣ ಜಾತ್ರೆಯಾದರೆ ತಹಶೀಲ್ದಾರ್, ಉಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಂಗಳ ಮೊದಲೇ ಸ್ಥಳಕ್ಕೆ ಭೇಟಿ ನೀಡಿ ಜಾತ್ರೆ ನಡೆಸದಂತೆ ಮನವೊಲಿಸಲು ಸೂಚಿಸಲಾಗಿದೆ ಎಂದು ಅಶೋಕ್ ಹೇಳಿದರು.