KARNATAKA
ಅಯೋಧ್ಯೆ ಶ್ರೀ ರಾಮನ ದರ್ಶನ ಪಡೆದು ಅಲ್ಲೇ ಇಹಲೋಕ ತ್ಯಜಿಸಿದ ಉಡುಪಿಯ ಪಾಂಡುರಂಗ ಶಾನುಭಾಗ್..!

ಉಡುಪಿ : ಅಯೋಧ್ಯೆ ಶ್ರೀರಾಮ ದೇವರ ದರ್ಶನ ಪಡೆದ ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಪಾಂಡುರಂಗ ಶಾನುಭಾಗ್ ಬಳಿಕ ಅಲ್ಲೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಘಟನೆ ಭಾನುವಾರ ಅಪರಾಹ್ನ ನಡೆದಿದೆ.
ಪಾಂಡುರಂಗ ಶಾನುಭಾಗ್ ಬೆಳಗ್ಗೆ ರಾಮನ ದರ್ಶನ ಪಡೆದು ಧನ್ಯತೆಯನ್ನು ವ್ಯಕ್ತಪಡಿಸಿ ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ತೆರಳಿದ್ದರು. ಅಪರಾಹ್ನದ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ಅವರಿಗೆ ಹೃದಯಾಘಾತವಾಗಿದೆ. ಜೊತೆಗಿದ್ದವರು ಕೂಡಲೇ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಾಗಿತ್ತು. ಬೆಳಿಗ್ಗೆ ಶಾನಾಭಾಗರಿಗೆ ಸಂತೋಷದಿಂದ ತೀರ್ಥಪ್ರಸಾದ ನೀಡಿ, ಸಂಸ್ಕೃತದಲ್ಲೇ ಸಂಭಾಷಣೆ ನಡೆಸಿ ಕುಶಲೋಪರಿ ನಡೆಸಿದ್ದ ಪೇಜಾವರ ಶ್ರೀಗಳು ಸಾವಿನ ಸುದ್ದಿ ತಿಳಿದು ಆಘಾತ ವ್ಯಕ್ತಪಡಿಸಿದ್ದಾರೆ.

ಅವರ ಆತ್ಮಕ್ಕೆ ರಾಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ವಿಶ್ವ ಹಿಂದು ಪರಿಷತ್‌ನ ಮುಖಂಡ ಗೋಪಾಲ್‌ಜಿ ಮತ್ತು ಮಾಜಿ ಶಾಸಕ ರಘುಪತಿ ಭಟ್ ಸ್ಥಳದಲ್ಲಿದ್ದು ಮುಂದಿನ ವ್ಯವಸ್ಥೆಗಳನ್ನು ನಡೆಸಿದ್ದಾರೆ. ಅಂಧತ್ವವಿದ್ದರೂ ಜೀವನ ಪರ್ಯಂತ ಹಿಂದೂ ಸಿದ್ಧಾಂತಕ್ಕಾಗಿ ದುಡಿದಿದ್ದ ಪಾಂಡುರಂಗ ಭಾಗವತ್ ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದರು. ಅಪೂರ್ವ ಚಿಂತಕ ಮತ್ತು ಅನನ್ಯ ರಾಷ್ಟ್ರಭಕ್ತ ಆಗಿದ್ದರು. ಅವರ ಅಗಲುವಿಕೆಯಿಂದ ನಿಜಕ್ಕೂ ದುಃಖವಾಗಿದೆ. ಆದರೆ ರಾಮ ದರ್ಶನ ಪಡೆದು ರಾಮನ ಪಾದಮೂಲದಲ್ಲಿ ಜೀವನಯಾತ್ರೆ ಮುಗಿಸಿದ ಶಾನುಭಾಗರ ಜೀವನ ರಾಮನ ಚಿತ್ತಕ್ಕೂ ಬಂದಂತಿದೆ. ಅವರ ದಿವ್ಯ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಶಾಸಕ ಸುನಿಲ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.