KARNATAKA
ಪಡುಬಿದ್ರಿ ಸಹಿತ ದೇಶದ 8 ಬೀಚ್‌ಗಳಿಗೆ ‘ಬ್ಲೂಫ್ಲ್ಯಾಗ್’ ವಿಶ್ವ ಮಾನ್ಯತೆ

ಪಡುಬಿದ್ರಿ, ಅಕ್ಟೋಬರ್ 13 : ಪಡುಬಿದ್ರಿ-ಹೆಜಮಾಡಿ ಸಂಗಮ ಸ್ಥಳವಾದ ಮುಟ್ಟಳಿವೆ ಬಳಿ ಅಭಿವೃದ್ಧಿಪಡಿಸಲಾದ ಪಡುಬಿದ್ರಿ ಬೀಚ್ ಸಹಿತ ದೇಶದ 8 ಬೀಚ್‌ಗಳು ಬ್ಲೂಫ್ಲ್ಯಾಗ್ ವಿಶ್ವ ಮಾನ್ಯತೆ ಗಳಿಸಿಕೊಂಡಿವೆ.
ದೇಶದ ನಾನಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರುತಿಸಲ್ಪಟ್ಟಿದ್ದ ಎಂಟು ಬೀಚ್‌ಗಳು ಕೇಂದ್ರ ಸರಕಾರದ ತಲಾ 8 ಕೋಟಿ ರೂ.ಗಳ ಯೋಜನೆಯಂತೆ ಪರಿಸರ ಸಹ್ಯವಾಗಿ ಮಾರ್ಪಾಟುಗೊಂಡು ಬ್ಲೂಫ್ಲ್ಯಾಗ್ ಮಾನ್ಯತೆ ಗಳಿಸಿಕೊಂಡಿವೆ.

ಪಡುಬಿದ್ರಿ ಸಹಿತ ಗುಜರಾತ್‌ನ ಶಿವರಾಜ್‌ಪುರ್, ದಿಯು-ದಾಮನ್‌ನ ಘೋಗ್ಲಾ, ಕರ್ನಾಟಕದ ಕಾಸರಕೋಡ್(ಉಕ,), ಕೇರಳದ ಕಪ್ಪಡ್, ಆಂಧ್ರಪ್ರದೇಶದ ಋುಷಿಕೊಂಡ, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ನಿಕೋಬಾರ್‌ನ ರಾಧಾನಗರ್ ಬೀಚ್‌ಗಳು ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಬ್ಲೂಫ್ಲ್ಯಾಗ್ ಸರ್ಟಿಫಿಕೇಶನ್ ಮುಡಿಗೇರಿಸಿಕೊಂಡಿವೆ.
ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್ ವಿಶ್ವದ 50 ರಾಷ್ಟ್ರಗಳಲ್ಲಿನ ಪರಿಸರ ಸಹ್ಯ ಬೀಚ್‌ಗಳಿಗೆ ನೀಡಲಾಗುವ ಬೀಚ್ ಸ್ವಚ್ಛತೆಯ 3ನೇ ಬಹುಮಾನವನ್ನೂ ಗಳಿಸಿಕೊಂಡಿದ್ದು ದಾಖಲೆಯಾಗಿದೆ.
ಬ್ಲೂಫ್ಲ್ಯಾಗ್ ಸರ್ಟಿಫಿಕೇಶನ್‌ಗೆ ಪಡುಬಿದ್ರಿ ಬೀಚ್ ಒಳಪಟ್ಟಿರುವ ಬಗೆಗೆ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಕೇಂದ್ರ ಸಚಿವಾಲಯದ ಸೂಚನೆಯಂತೆ ಬ್ಲೂಫ್ಲ್ಯಾಗ್ ಧ್ವಜಾರೋಹಣವನ್ನೂ ನಿರ್ಧರಿತ ದಿನಾಂಕದಂದು ಇಲ್ಲಿಯ ಸಹಿತ ಎಲ್ಲ8 ಬೀಚ್‌ಗಳಲ್ಲೂ ನೆರವೇರಿಸಲಾಗುತ್ತದೆ. ರಾಜ್ಯ ಸರಕಾರದಿಂದ 5.91 ಕೋಟಿ ರೂ. ಅನುದಾನಕ್ಕಾಗಿ ಈಗಾಗಲೇ ಜಿಲ್ಲಾಪ್ರಸಾವೋದ್ಯಮ ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆ ಮೂಲಕ ಬೀಚ್ ಪಕ್ಕದ ದ್ವೀಪವೊಂದನ್ನು ಅಭಿವೃದ್ಧಿಪಡಿಸಲಾಗುವುದು. ರಸ್ತೆ ಅಭಿವೃದ್ಧಿ ಸಹಿತ ವಿಶಾಲ ವಾಹನ ಪಾರ್ಕಿಂಗ್‌ಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂದರು.
ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್‌ನ ಪ್ರಬಂಧಕ ವಿಜಯ್ ಶೆಟ್ಟಿ ಈ ಕುರಿತು ಹರ್ಷ ವ್ಯಕ್ತಪಡಿಸಿದ್ದು, ತಾವು ಈ ಸರ್ಟಿಫಿಕೇಶನ್‌ಗೆ ಅಗತ್ಯವಾಗಿರುವ ಎಲ್ಲ 33 ಮಾನದಂಡಗಳನ್ನು ಈಗಾಗಲೇ ಪೂರೈಸಿಕೊಂಡಿದ್ದೇವೆ. ಕೆಲವು ಕೆಲಸ ಕಾರ್ಯಗಳು ಮಳೆ ನಿಂತ ಬಳಿಕಷ್ಟೇ ನಾವು ಕೈಗೆತ್ತಿಕೊಳ್ಳಬೇಕಿದೆ. ರಾಜ್ಯ ಮತ್ತು ಜಿಲ್ಲಾಡಳಿತಗಳೂ ಈ ನಿಟ್ಟಿನಲ್ಲಿ ತಮಗೆ ಸಹಕರಿಸಿವೆ. ರಾಷ್ಟ್ರೀಯ ಜ್ಯೂರಿಗಳೂ ಪಡುಬಿದ್ರಿ ಬೀಚ್ ಬಗ್ಗೆ ಉತ್ತಮ ಶ್ಲಾಘನೆ ವ್ಯಕ್ತಪಡಿಸಿದ್ದು ಇದು ಬೀಚ್ ಸ್ವಚ್ಛತೆಯ ಆಧಾರದಲ್ಲಿ ವಿಶ್ವ ಮಟ್ಟದಲ್ಲಿ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.